UGC-NET ಫಲಿತಾಂಶ ಪ್ರಕಟ; 84 ವಿಷಯಗಳ ಸ್ಕೋರ್‌ಕಾರ್ಡ್ ಬಿಡುಗಡೆ, 4 ಸಾವಿರಕ್ಕೂ ಹೆಚ್ಚು ಮಂದಿಗೆ JRF

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 2026ರ UGC-NET ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 84 ವಿಷಯಗಳ ಸ್ಕೋರ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ 6 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ಪೈಕಿ 97,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, 4,000ಕ್ಕೂ ಹೆಚ್ಚು ಅಭ್ಯರ್ಥಿಗಳು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF)ಗೆ ಅರ್ಹತೆ ಗಳಿಸಿದ್ದಾರೆ.

ಅಭ್ಯರ್ಥಿಗಳು UGC-NETನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ವೀಕ್ಷಿಸಿ, ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಬಹುದು ಎಂದು NTA ತಿಳಿಸಿದೆ.

ಆದರೆ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ ಹಾಜರಾಗಿದ್ದ ಅಭ್ಯರ್ಥಿಗಳ ಫಲಿತಾಂಶವನ್ನು ಸದ್ಯ ಪ್ರಕಟಿಸಲಾಗಿಲ್ಲ. ಈ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ವಾಸ್ತವಾಂಶ, ಮುದ್ರಣ, ಅನುವಾದ ಹಾಗೂ ಭಾಷೆಗೆ ಸಂಬಂಧಿಸಿದ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಮರು ಪರೀಕ್ಷೆ ನಡೆಸಲು NTA ನಿರ್ಧರಿಸಿದೆ.

ಸೆಪ್ಟೆಂಬರ್ 9, 10ರಂದು ಮರು ಪರೀಕ್ಷೆ; ಹೆಚ್ಚುವರಿ ಶುಲ್ಕವಿಲ್ಲ

ಇಂಗ್ಲಿಷ್ ಮತ್ತು ವಾಣಿಜ್ಯ ವಿಷಯಗಳ ಮರು ಪರೀಕ್ಷೆ ಸೆಪ್ಟೆಂಬರ್ 9ರಂದು ಹಾಗೂ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಸೆಪ್ಟೆಂಬರ್ 10ರಂದು ನಡೆಯಲಿದೆ. ಈ ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ವಸೂಲಿ ಮಾಡಲಾಗುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ.

ಮರು ಪರೀಕ್ಷೆಗೆ ಹೊಸ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪ್ರಸ್ತುತ 84 ವಿಷಯಗಳಿಗೆ ಪ್ರಕಟಿಸಿರುವ ಫಲಿತಾಂಶ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತಾ ಪ್ರಕ್ರಿಯೆಗೆ ಈ ಮರು ಪರೀಕ್ಷೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಸೆಪ್ಟೆಂಬರ್ 9 ಮತ್ತು 10ರಂದು ಮರು ಪರೀಕ್ಷೆ ನಡೆಯಲಿರುವ ಇಂಗ್ಲಿಷ್, ವಾಣಿಜ್ಯ ಹಾಗೂ ಸಮಾಜಶಾಸ್ತ್ರ ಅಭ್ಯರ್ಥಿಗಳು ಸದ್ಯ ಸ್ಕೋರ್‌ಕಾರ್ಡ್ ಪಡೆಯಲು ಪ್ರಯತ್ನಿಸಿದರೆ ‘Invalid Application Number/Password’ ಎಂಬ ಸಂದೇಶ ಕಾಣಿಸಿಕೊಳ್ಳಬಹುದು. ಈ ಮೂರು ವಿಷಯಗಳ ಅಭ್ಯರ್ಥಿಗಳ ಫಲಿತಾಂಶ ಹಾಗೂ ಸ್ಕೋರ್‌ಕಾರ್ಡ್‌ಗಳನ್ನು ಮರು ಪರೀಕ್ಷೆ ಪೂರ್ಣಗೊಂಡ ಬಳಿಕ ಮಾತ್ರ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು NTA ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

ಜೂನ್ 2026ರ UGC-NET ಫಲಿತಾಂಶವನ್ನು ಆಗಸ್ಟ್ 28ರಂದು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ಪರಿಶೀಲಿಸಬಹುದಾಗಿದೆ.

Related posts