ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕಾಂಗ್ರೆಸ್ ಅಸಂಬದ್ಧ ಟೀಕೆ ಮಾಡಿದೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ..
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್; ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದೆ. 4 ವರ್ಷದ ಹಿಂದೆ ಸರ್ಕಾರ ಮಾಡಲು ಸಿದ್ದರಾಮಯ್ಯ, ಡಿಕೆಶಿ ಅವರ ಮನೆಗೆ ಕುಮಾರಸ್ವಾಮಿ ಅವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ದೇವೇಗೌಡರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿ ಅವರನ್ನು ಪಾಪರಾಜ್ಜಿಗಳಂತೆ ಬೆನ್ಹತ್ತಿ, ಆಮೇಲೆ ಕಾಡಿ ಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ? ಎಂದು ಕಾಂಗ್ರೆಸ್ಸಿಗೆ ಜೆಡಿಸ್ ಎಚ್ಚರಿಕೆ ನೀಡಿದೆ.
‘ಕೈ’ ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿ.ಕೆ.ಶಿವಕುಮಾರ್ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’ ಎಂದು ಅವರಿಗೆ ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲಿ ‘ಕೈ’ ಎತ್ತಿದರು, ಮಂಡ್ಯದಲ್ಲೂ ‘ಕೈ’ ಎತ್ತಿದರು. ಬೆಂಗಳೂರು ಗ್ರಾಮಾಂತರದಲ್ಲೂ ‘ಕೈ’ ಎತ್ತಿದರು!! ಪಾಪ.. ಕುಮಾರಸ್ವಾಮಿ ಅವರು ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು, ಅವರ ‘ಕೈ’ ಹಿಡಿದರು. ಮಂಡ್ಯದಲ್ಲಿ ಅದೇ ‘ಕೈ’ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು.
ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಸಘಾತುಕಕ್ಕೇ ಹೆಸರುವಾಸಿ.. ಅಲ್ಲವೇ? ಎಂದು ಜೆಡಿಎಸ್ ಖಾರವಾಗಿ ಕೇಳಿದೆ.
ಕುಮಾರಸ್ವಾಮಿ ಅವರ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ, ನಿಜ. ಇಲ್ಲ ಎಂದವರು ಯಾರು? ಇನ್ನೊಬ್ಬರ ಕಣ್ಣಲ್ಲಿ ರಕ್ತ ಸುರಿಸುವ ಕೆಲಸವನ್ನು ಅವರೆಂದೂ ಮಾಡಿಲ್ಲ, ಅವರ ನಾಲಿಗೆ ಸತ್ಯದ ಕಡೆಗೆ ಹೊರಳಿದೆಯೇ ಹೊರತು, ಅಸತ್ಯದೆಡೆಗಲ್ಲ. ಅಣ್ಣಾ.. ಅಣ್ಣಾ ಎಂದ ಆಚಾರವಿಲ್ಲದ ಆ ನಾಲಿಗೆ, ಇಂಥಾ ನೀಚ ಬುದ್ಧಿ ಬಿಡುವುದು ಯಾವಾಗ? ಪಿಹೆಚ್ ಡಿ ಮಾಡೋದಕ್ಕೆ ಅವರಿಂತ ಉತ್ತಮ ಗೈಡ್ ಬೇರೆ ಸಿಕ್ಕಾರೆಯೇ ನಿಮಗೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ..
ಖರ್ಗೆಯನ್ನು ದಿಲ್ಲಿಗೆ ಅಟ್ಟಿದವರು ಯಾರು?
ದೇವೇಗೌಡರು, ಕುಮಾರಸ್ವಾಮಿ ಅವರಿಗೆ ದ್ರೋಹವೆಸಗಿದವರ ಪಟ್ಟಿಯನ್ನು ನೀವೆ ಮಾಡಿದ್ದೀರಿ, ಸಂತೋಷ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಪಮಾನಕರವಾಗಿ ದೆಹಲಿಗೆ ಅಟ್ಟಿದವರು ಯಾರು? ಸಿದ್ದವನದಲ್ಲಿ ಸಿದ್ದಸೂತ್ರ ಹೆಣೆದು ಮೈತ್ರಿ ಸರಕಾರ ತೆಗೆದವರು ಯಾರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಾಡಿ-ಬೇಡಿ ತಂದ ಸರಕಾರಕ್ಕೆ ಅಂತ್ಯ ಕಾಣಿಸಿದ ಆ ಹ್ಯೂಬ್ಲೆಟ್ ವೀರನ ಬಗ್ಗೆ ಗೊತ್ತಿಲ್ಲವೇ? ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಗೆ ಪಿಂಡ ಪ್ರದಾನ ಮಾಡಿ ಸ್ವಪಕ್ಷವನ್ನೇ ಬೀದಿಯಲ್ಲಿ ನಿಲ್ಲಿಸಿದ ಆ ಲೋಕೋತ್ತರ ಜಾತ್ಯತೀತವಾದಿಯ ಅಸಲಿಮುಖ ಗೋಚರವಾಗಿಲ್ಲವೇ? ಎಂದು ಕೇಳಿದೆ ಜೆಡಿಎಸ್.
ಎಸ್.ಎಂ.ಕೃಷ್ಣರಿಗೆ ಅಪಮಾನ:
ನಿಮ್ಮ ಪಟ್ಟಿಯಲ್ಲಿರುವ ರಾಜಕೀಯದ ಪರಮ ಪುರುಷೋತ್ತಮರೆಲ್ಲರೂ ನಮ್ಮ ಪಕ್ಷಕ್ಕೆ ಬಂದರು. ಪೊಗದಸ್ತಾಗಿ ಉಂಡರು, ಆಮೇಲೆ ಎದ್ದು ಹೋದರು. ʼಉಂಡು ಹೋದ, ಕೊಂಡು ಹೋದʼ ಎನ್ನುತ್ತೀವಲ್ಲಾ.. ಹಾಗೆ. ಆದರೆ, ಅದೇ ಸಿದ್ದಪುರುಷನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡವರು, ‘ಅನ್ ಪಾಲಿಷ್ಡ್ ಡೈಮಂಡ್’ ಎಂದು ಸೋನಿಯಾ ಗಾಂಧಿ ಅವರ ಮುಂದೆ ವಕಾಲತ್ತು ಹಾಕಿದ ಎಸ್.ಎಂ.ಕೃಷ್ಣ ಅವರ ಬಗ್ಗೆ ಈ ಪರಿಯ ಕೃತಜ್ಞತೆಗೆ ಏನಾಗಿತ್ತು? ಕೃತಜ್ಞತೆ, ಕರುಣೆ, ಉಪಕಾರ ಸ್ಮರಣೆಗಳ ಕತ್ತು ಕುಯ್ದು ರಾಜಕೀಯದ ಅಂತ್ಯಕಾಲದಲ್ಲಿ ಅವರು ಬಿಜೆಪಿಗೆ ಹೋಗುವ ಸ್ಥಿತಿ ಸೃಷ್ಟಿಸಿದವರು ಯಾರು? ವಿಶ್ವಸಂಸ್ಥೆಯಿಂದ ದೆಹಲಿಗೆ ಮರಳಿದ ಕೂಡಲೇ ಅಪಮಾನಕರವಾಗಿ ಸಂಪುಟದಿಂದ ಅವರನ್ನು ಕಿತ್ತೊಗೆದದ್ದು ಉಪಕಾರ ಸ್ಮರಣೆಯೇ? ಕಷ್ಟಕಾಲದಲ್ಲಿ ಇಡೀ ಕಾಂಗ್ರೆಸ್ಸಿಗೆ ಆಸರೆ ಆಗಿದ್ದವರನ್ನು ತುಚ್ಛವಾಗಿ ಆಚೆಗಟ್ಟಿದ್ದು ಗೌರವವೇ? ಅವಕಾಶವಾದಿ, ಗೋಸುಂಬೆ, ನರಿಬುದ್ಧಿ ಯಾರದ್ದು? ಎಂದು ಜೆಡಿಎಸ್ ಟಾಂಗ್ ನೀಡಿದೆ.
ವಿಧಾನಸೌದದಲ್ಲಿ ಗುರುವಾರದ ಬಜಾರ್:
ನಂಬಿಕೆ, ಪ್ರಾಮಾಣಿಕತೆ, ನಿಷ್ಠೆ, ನಿಯತ್ತನ್ನು ಗುಜರಿಗೆ ಹಾಕಿ ʼಸಂಡೇ ಬಜಾರ್ʼನಂತೆ ವಿಧಾನಸೌಧವನ್ನೇ ʼಗುರುವಾರದ ಬಜಾರ್ʼ ಮಾಡಿಕೊಂಡವರು ನೀವು. ನಿಜಕ್ಕೂ ನಿಮಗೆ ಲಜ್ಜೆ ಇದೆಯಾ? ವಾರಕ್ಕೊಂದು ದಿನ, ಅದೂ ಗುರುವಾರದ ದಿನವಷ್ಟೇ ಸಂಪುಟ ನೆಪದಲ್ಲಿ 3ನೇ ಮಹಡಿಯಲ್ಲಿ ಕೆಲ ಹೊತ್ತಷ್ಟೇ ಠಳಾಯಿಸಿ, 24/7 ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವವರು ಲಜ್ಜೆಯಲ್ಲೂ ಕನಿಷ್ಠ-ಗರಿಷ್ಠ ಎಂದು ಅಳತೆ ಮಾಡುತ್ತಿರುವುದು ಅದ್ಭುತ.. ಅಲ್ಲಲ್ಲ.. ಅದ್ಭುತಃ! ಎಂದು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಟಾಂಗ್ ಕೊಟ್ಟಿದೆ.