ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ 7ನೇ ಕರಡು ಅಧಿಸೂಚನೆ ಕುರಿತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಅಧಿಸೂಚನೆಯಿಂದ ಗ್ರಾಮೀಣ ಜನರ ಜೀವನೋಪಾಯ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿ, ಜನರಿಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರವು ಜುಲೈ 27, 2026ರಂದು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ 7ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಈ ವಿಷಯ ಪ್ರಸ್ತುತ ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದರು.

ಹಿಂದಿನ ಅಧಿಸೂಚನೆಗಳನ್ನೂ ತಿರಸ್ಕರಿಸಿದ್ದ ರಾಜ್ಯ ಸರ್ಕಾರ

ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಹಲವು ಪ್ರದೇಶಗಳು ಈಗಾಗಲೇ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿವೆ. ಇಂತಹ ಪ್ರದೇಶಗಳಿಗೆ ಮತ್ತಷ್ಟು ನಿರ್ಬಂಧ ವಿಧಿಸುವುದರಿಂದ ಸಂರಕ್ಷಣೆಯ ಉದ್ದೇಶಕ್ಕೆ ಪ್ರತಿಕೂಲ ಪರಿಣಾಮ ಉಂಟಾಗುವುದರ ಜೊತೆಗೆ ಸ್ಥಳೀಯರ ಜೀವನೋಪಾಯಕ್ಕೂ ತೊಂದರೆಯಾಗಬಹುದು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದಿನ ಕರಡು ಅಧಿಸೂಚನೆಗಳನ್ನು ತಿರಸ್ಕರಿಸುವ ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದ್ದು, ಇದೇ ನಿಲುವನ್ನು 2024ರ ಸೆಪ್ಟೆಂಬರ್ 30ರಂದು ಕೇಂದ್ರ ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಅಧಿಸೂಚಿತ ಗ್ರಾಮಗಳ ಭೌತಿಕ ಸರ್ವೇಗೆ ಒತ್ತಾಯ

ಹಿಂದಿನ ಆರು ಅಧಿಸೂಚನೆಗಳಂತೆ 7ನೇ ಕರಡು ಅಧಿಸೂಚನೆಯೂ ವೈಮಾನಿಕ ಸಮೀಕ್ಷೆ ಆಧರಿಸಿದೆ. ಗ್ರಾಮಗಳ ಅಕ್ಷಾಂಶ ಮತ್ತು ರೇಖಾಂಶಗಳನ್ನು ನೀಡಲಾಗಿದ್ದರೂ, ಗಡಿ ರೇಖೆ ವಾಸ್ತವವಾಗಿ ಯಾವ ಭಾಗದಲ್ಲಿ ಹಾದುಹೋಗುತ್ತದೆ ಎಂಬುದು ಸ್ಥಳೀಯರಿಗೆ ಸ್ಪಷ್ಟವಾಗಿಲ್ಲ.

ಹೀಗಾಗಿ ಅಧಿಸೂಚಿತ ಗ್ರಾಮಗಳ ಭೌತಿಕ ಸರ್ವೇಯನ್ನು ರಾಜ್ಯ ಸರ್ಕಾರದ ಮೂಲಕ ಒಂದು ಬಾರಿ ನಡೆಸಿ, ಜನರ ಆತಂಕ ನಿವಾರಿಸಬೇಕು. ಸ್ಥಳೀಯರ ಜೀವನೋಪಾಯ ಮತ್ತು ವಾಸ್ತವ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಅದನ್ನು ಆಧರಿಸಿ ಕೇಂದ್ರದೊಂದಿಗೆ ಸಮನ್ವಯ ಸಾಧಿಸಲು ಇದು ನೆರವಾಗಲಿದೆ ಎಂದು ಗಂಟಿಹೊಳೆ ಸರ್ಕಾರವನ್ನು ಒತ್ತಾಯಿಸಿದರು.

Related posts