ನಗರಗಳಲ್ಲಿ ಶಾಖದ ಒತ್ತಡ ತಗ್ಗಿಸಲು ಕೇಂದ್ರದ ಕ್ರಮ; 12 ನಗರಗಳಲ್ಲಿ ಪೈಲಟ್ ಯೋಜನೆ

ನವದೆಹಲಿ: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಮತ್ತು ಅರ್ಬನ್ ಹೀಟ್ ಐಲ್ಯಾಂಡ್ (UHI) ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಸಿರು ಮೂಲಸೌಕರ್ಯ, ತಂಪಾದ ಛಾವಣಿಗಳು ಹಾಗೂ ಹವಾಮಾನ-ನಿರೋಧಕ ನಗರಗಳ ನಿರ್ಮಾಣಕ್ಕೆ ಒತ್ತು ನೀಡಿದೆ. ಅಮೃತ್ 2.0 ಯೋಜನೆಯಡಿ 12 ನಗರಗಳಲ್ಲಿ ಪೈಲಟ್ ಕಾರ್ಯಕ್ರಮ ಆರಂಭಿಸಲಾಗಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಮಾರ್ಗಸೂಚಿಗಳಂತೆ 23 ರಾಜ್ಯಗಳು, 195 ಜಿಲ್ಲೆಗಳು ಹಾಗೂ 64 ನಗರಗಳು ಶಾಖದ ಅಲೆಗಳಿಗೆ ತಕ್ಕಂತೆ ಕಾರ್ಯಯೋಜನೆ ರೂಪಿಸಿವೆ. ಬೀದಿ ವ್ಯಾಪಾರಿಗಳು ಹಾಗೂ ಅನೌಪಚಾರಿಕ ಕಾರ್ಮಿಕರ ರಕ್ಷಣೆಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ತಂಪು ಕೇಂದ್ರಗಳು, ಹೊಂದಿಕೊಳ್ಳುವ ಕೆಲಸದ ಸಮಯ ಹಾಗೂ ಶಾಖ ಎಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತಿದೆ.

ಭಾರತ ತಂಪಾಗಿಸುವ ಕ್ರಿಯಾ ಯೋಜನೆ (ICAP) ಮೂಲಕ ಇಂಧನ ದಕ್ಷತೆ ಹೆಚ್ಚಿಸುವುದು ಮತ್ತು ಸುಸ್ಥಿರ ತಂಪಾಗಿಸುವ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಅಮೃತ್ ಹಾಗೂ ಅಮೃತ್ 2.0 ಅಡಿಯಲ್ಲಿ 4,171 ಉದ್ಯಾನಗಳು, 2,960 ಜಲಮೂಲ ಯೋಜನೆಗಳು, 473 ಕಿ.ಮೀ. ಹಸಿರು ಸಂಚಾರ ಮಾರ್ಗಗಳು ಮತ್ತು 99 ಲಕ್ಷ ಎಲ್‌ಇಡಿ ಬೀದಿ ದೀಪಗಳು ಅಭಿವೃದ್ಧಿಪಡಿಸಲಾಗಿದೆ.

2025-26ರಲ್ಲಿ ‘ಅಮೃತ್ ಮಿತ್ರ–ಮರಗಳಿಗಾಗಿ ಮಹಿಳೆಯರು’ ಅಭಿಯಾನದಡಿ 7.65 ಲಕ್ಷ ಸಸಿಗಳನ್ನು ನೆಡಲಾಗಿದೆ.

ಬೆಂಗಳೂರು ಸೇರಿದಂತೆ 12 ನಗರಗಳಲ್ಲಿ ಶಾಖಕ್ಕೆ ಅತೀ ಹೆಚ್ಚು ತುತ್ತಾಗುವ ಪ್ರದೇಶಗಳನ್ನು ಗುರುತಿಸಿ, ನಗರ ಹಸಿರೀಕರಣ, ಜಲ ಸಂರಕ್ಷಣೆ ಮತ್ತು ನೈಸರ್ಗಿಕ ತಂಪುಗೊಳಿಸುವ ಕ್ರಮಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ರಾಜ್ಯಸಭೆಗೆ ತಿಳಿಸಿದ್ದಾರೆ.

Related posts