ಬೆಂಗಳೂರು: ಮಹಾಮಾರಿ ಕೊರೋನಾ ಇಡೀ ಜಗತ್ತಿನಲ್ಲೇ ಮರಣ ಮೃದಂಗ ಬಾರಿಸುತ್ತಿದೆ. ಇದೆ ವೇಳೆ ಸರ್ಕಾರದ ಕ್ರಮಗಳ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಅಪಪ್ರಚಾರದ ಕೃತ್ಯಗಳೂ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಕೊರೋನಾ ವೈರಸ್ ಕುರಿತಂತೆ ಸಾಮಾಜಿಕ ಜಾಲತಾಣಗಳನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸುವ ಪ್ರಯತ್ನ ಮಾಡುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು ಸರ್ಕಾರ ಕೂಡಾ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿದೆ.
ಈ ನಡುವೆ, ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗುತ್ತದೆಯೇ? ಎಂಬ ಪ್ರಶ್ನೆಗಳೂ ಹರಿದಾಡುತ್ತಿವೆ. ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿಗಳು ಹರಡದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಸರ್ಕಾರವು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರ ಪುಷ್ಟಿ ನೀಡಿದೆ.
ಹೆಚ್.ಕೆ.ಪಾಟೀಲ್ ಪತ್ರದ ಸಾರಾಂಶ ಹೀಗಿದೆ:
“ಸರ್ಕಾರವು ಅಂತರ್ಜಾಲ ವ್ಯವಸ್ಥೆಯನ್ನು ಕಡಿತಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ತಿಳಿದಿದೆ. ಅಂತಾರ್ಜಾಲ ವ್ಯವಸ್ಥೆಯನ್ನು ಈ ರೀತಿಯಾಗಿ ಸಂಪೂರ್ಣ ಸ್ಥಗಿತಗೊಳಿಸುವುದರಿಂದ ಯಾವುದೇ ಸಾಧನೆಯಾಗುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಲವಾರು ಮೂಲಗಳಿಂದ ನನಗೆ ಮಾಹಿತಿ. ಆದರೆ ಈ ಮಾಹಿತಿ ಸರಿಯಾಗಿದ್ದರೆ ಅದು ಗಂಭೀರವಾದ ದುಷ್ಪರಿಣಾಮಗಳನ್ನು ಬೀರುತ್ತದೆ. ಸುಳ್ಳು ಮಾಹಿತಿ ಹರಡುವವರ ವಿರುದ್ದ ಕ್ರಮ ಕೈಗೊಳ್ಳಬಹುದೇ ಹೊರತು ಅದಕ್ಕಾಗಿ ಇಡೀ ವ್ಯವಸ್ಥೆಯನ್ನೇ ನಿಲುಗಡೆ ಮಾಡಕೂಡದು. ಅಂತಹಾ ಯಾವುದೇ ಆಲೋಚನೆ ಸರ್ಕಾರಕ್ಕಿದ್ದರೆ ಅದನ್ನು ದಯವಿಟ್ಟು ಕೈಬಿಡಿ..”
ಹೆಚ್.ಕೆ.ಪಾಟೀಲ್ ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಈ ಪತ್ರ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ಮಧ್ಯೆ ರಾಜ್ಯ ಸರ್ಕಾರ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಯವರ ಆಪ್ತ ವಲಯ ಹೇಳುತ್ತಿದೆ. ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಬಹುತೇಕ ಕಂಪೆನಿಗಳು ವರ್ಕ್ ಪ್ರಮ್ ಹೋಮ್ ವ್ಯವಸ್ಥೆಯನ್ನು ಅವಲಂಭಿಸಿದೆ. ಈ ವ್ಯವಸ್ಥೆಯು ಇಂಟರ್ನೆಟ್ ಹೊರತಾಗಿ ಸಾಧ್ಯವೇ ಇಲ್ಲ. ಹೀಗಿರುವಾಗ ಇಂತಹಾ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಐಟಿ ಕ್ಷೇತ್ರದ ಮಂದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.