ಬೆಂಗಳೂರು: ಎಐಯುಟಿಯುಸಿ (AIUTUC) ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ 12ನೇ ದಿನವೂ ಮುಂದುವರಿದಿದೆ. ಶನಿವಾರವೂ ಹಲವು ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಕರ್ತೆಯರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಬರಹಗಾರ್ತಿ ಹಾಗೂ ಸ್ತ್ರೀವಾದಿ ಚಿಂತಕಿ ಆಶಾ ದೇವಿ ಮಾತನಾಡಿ, ಬಲಿಷ್ಠರಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿದೆ; ಆದರೆ ದುಡಿಯುವ ಜನರ ಬೇಡಿಕೆ ಈಡೇರಿಸಲು ಹಣವಿಲ್ಲ ಎಂಬ ಧೋರಣೆ ಸರಿಯಲ್ಲ ಎಂದು ಟೀಕಿಸಿದರು. ಹಿಂದಿನ ಗಾರ್ಮೆಂಟ್ಸ್ ಕಾರ್ಮಿಕರ ಹೋರಾಟವನ್ನು ನೆನಪಿಸಿದ ಅವರು, ಆಶಾ ಕಾರ್ಯಕರ್ತೆಯರು ಹೋರಾಟ ಕೈಬಿಡದೆ ಮುಂದುವರಿಸಬೇಕು. ಅಂತಿಮವಾಗಿ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟ ಚೇತನ್ ಅಹಿಂಸಾ ಮಾತನಾಡಿ, ಹಠ ಮಾಡುತ್ತಿರುವುದು ಸರ್ಕಾರವೇ ಹೊರತು ಕಾರ್ಮಿಕರಲ್ಲ. ಆಶಾ ಕಾರ್ಯಕರ್ತೆಯರ ಹೋರಾಟ ನ್ಯಾಯಯುತವಾಗಿದ್ದು, ಸರ್ಕಾರ ಕೇಂದ್ರದತ್ತ ಬೆರಳು ತೋರಿಸುವ ಬದಲು ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು. ದುಡಿಯುವ ಜನರಿಗೆ ಸೌಲಭ್ಯ ಕಲ್ಪಿಸಲು ಉಳ್ಳವರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದ ಅವರು, ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು.
ಪತ್ರಕರ್ತ ಚಂದ್ರಕಾಂತ್ ವಡ್ಡು ಮಾತನಾಡಿ, 4.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವುದು ಕಷ್ಟವೇನಲ್ಲ. ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಹಲವು ಬಾರಿ ಭರವಸೆಗಳಿಂದ ವಂಚಿತರಾಗಿರುವ ಕಾರ್ಯಕರ್ತೆಯರು ಲಿಖಿತ ಆದೇಶಕ್ಕೆ ಪಟ್ಟು ಹಿಡಿದಿರುವುದು ನ್ಯಾಯಸಮ್ಮತ ಎಂದು ಹೇಳಿದರು.

