ಜಪಾನ್‌ನಿಂದ ಕರ್ನಾಟಕಕ್ಕೆ ₹800 ಕೋಟಿ ಹೂಡಿಕೆ ಒಪ್ಪಂದ! 10 ವರ್ಷಗಳಲ್ಲಿ 600 ಉದ್ಯೋಗ ಸೃಷ್ಟಿ; ಬೆಂಗಳೂರಿನಾಚೆಗೂ ಕೈಗಾರಿಕೆ ವಿಸ್ತರಣೆಗೆ ಆದ್ಯತೆ

ಬೆಂಗಳೂರು: ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸುವುದು ಹಾಗೂ ಬೆಂಗಳೂರಿನಾಚೆಗೂ ಕೈಗಾರಿಕೆಗಳನ್ನು ವಿಸ್ತರಿಸಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಜಪಾನ್ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನವೆಂಬರ್ 23ರಿಂದ 25ರವರೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳ ನಿಯೋಗದೊಂದಿಗೆ ಕೈಗೊಂಡಿದ್ದ ಮೂರು ದಿನಗಳ ಜಪಾನ್ ಪ್ರವಾಸದ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪ್ರವಾಸದ ವೇಳೆ ಕವಾಸಕಿ-ವಿಪ್ರೋ ಕವಾಸಕಿ ಸಂಸ್ಥೆಯು ಹಾರೋಹಳ್ಳಿ ಘಟಕ ವಿಸ್ತರಣೆಗೆ ಮುಂದಿನ 10 ವರ್ಷಗಳಲ್ಲಿ ₹800 ಕೋಟಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ. ಇದರಿಂದ 600 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಟೊಯೊಟಾ, ಪ್ಯಾನಾಸೋನಿಕ್, ಜೆಎಫ್‌ಇ ಸ್ಟೀಲ್, ಜೆಎಕ್ಸ್ ಮೆಟಲ್ಸ್ ಮತ್ತು ಟಕೆಡಾ ಕಂಪನಿಗಳೊಂದಿಗೆ ಸ್ಥಳೀಕರಣ, ಹೈಬ್ರಿಡ್ ವಾಹನ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಉಕ್ಕು ಉತ್ಪಾದನೆ ಕುರಿತು ಚರ್ಚಿಸಲಾಗಿದೆ. ಸುಮಿಟೊಮೊ ಸಹಯೋಗದಲ್ಲಿ ಜಪಾನ್ ಕೈಗಾರಿಕಾ ಪಾರ್ಕ್ ಸ್ಥಾಪನೆ, ಜಪಾನಿ ಶಾಲೆ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾ ತರಬೇತಿ ನೀಡುವ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದರು.

ಜಪಾನ್‌ನ ಒಯಾಸಿಸ್ 21, ಅಜಬುದೈ ಹಿಲ್ಸ್ ಮತ್ತು ಶಿಬುಯಾ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಲಾಗಿದ್ದು, ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಪುನರಾಭಿವೃದ್ಧಿ, ವಾಣಿಜ್ಯ ಸ್ಥಳ ಹಾಗೂ ಸಿಗ್ನೇಚರ್ ಲ್ಯಾಂಡ್‌ಮಾರ್ಕ್ ಟವರ್ ನಿರ್ಮಾಣದ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಒಸಾಕಾದ ಮೈಶಿಮಾ ಘಟಕದ ಮಾದರಿಯಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ವ್ಯವಸ್ಥೆ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ 2027’ ಸಮಾವೇಶಕ್ಕೆ ಜಪಾನ್ ಸರ್ಕಾರ ಮತ್ತು ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಸಮಾವೇಶದಲ್ಲಿ ಪ್ರತ್ಯೇಕ ‘ಜಪಾನ್ ಕಂಟ್ರಿ ಪೆವಿಲಿಯನ್’ ಸ್ಥಾಪಿಸುವ ಪ್ರಸ್ತಾವನೆಯನ್ನೂ ಮುಂದಿಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Related posts