‘ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದರೆ ಆತ ಹಿಂದೂ ಅಲ್ಲ’: ಮೋಹನ್ ಭಾಗವತ್

ನ್ಯೂಯಾರ್ಕ್: ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾರಾದರೂ ಹಿಂದೂ ಭಾವಿಸಿದರೆ, ಅವರು ಹಿಂದೂಗಳಾಗಿ ಉಳಿಯುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಎಲ್ಲ ಧರ್ಮಗಳು ಮತ್ತು ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು ಎಂದು ಪ್ರತಿಪಾದಿಸಿದರು.

2018ರಲ್ಲಿ ಮುಸ್ಲಿಂ ಸಮುದಾಯದವರೊಂದಿಗಿನ ಸಂವಾದವನ್ನು ನೆನಪಿಸಿಕೊಂಡ ಭಾಗವತ್, ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯಲ್ಲಿ ಮುಸ್ಲಿಮರ ಸ್ಥಾನವೇನು, ಅವರನ್ನು ಭಾರತದಿಂದ ಹೊರಹಾಕಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿತ್ತು ಎಂದು ಹೇಳಿದರು. ಅದಕ್ಕೆ ‘ಇಲ್ಲ, ಅದು ಹಿಂದುತ್ವವಲ್ಲ’ ಎಂದು ಉತ್ತರಿಸಿದ್ದಾಗಿ ತಿಳಿಸಿದರು.

ವಿಭಿನ್ನ ನಂಬಿಕೆಗಳು ಒಂದೇ ಅಂತಿಮ ಸತ್ಯದತ್ತ ಸಾಗುವ ಮಾರ್ಗಗಳಾಗಿವೆ. ವೈವಿಧ್ಯತೆಯು ಪ್ರಕೃತಿಯ ನಿಯಮವಾಗಿದ್ದು, ಅದರ ಹಿಂದಿರುವ ಸತ್ಯ ಏಕತೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸುವುದು ಅಗತ್ಯ ಎಂದರು.

‘ಸಮಾಜದಿಂದಲೇ ಬದಲಾವಣೆ ಆರಂಭವಾಗಬೇಕು’

ಅಂತರಧರ್ಮೀಯ ಸಹಕಾರಕ್ಕೆ ಆರ್‌ಎಸ್‌ಎಸ್ ತನ್ನ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭಾಗವತ್ ಹೇಳಿದರು. 30 ದೇಶಗಳಿಂದ 180ಕ್ಕೂ ಹೆಚ್ಚು ಧಾರ್ಮಿಕ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ದ್ವೇಷ, ಹಿಂಸೆ ಮತ್ತು ಧಾರ್ಮಿಕ ಆಧಾರದ ತಾರತಮ್ಯವನ್ನು ತಿರಸ್ಕರಿಸುವ ಬದ್ಧತೆಯನ್ನು ನಾಯಕರು ವ್ಯಕ್ತಪಡಿಸಿದರು.

ಸಂವಾದ ಮತ್ತು ಸೇವೆಯ ಮೂಲಕ ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಕಡಿಮೆ ಮಾಡಬೇಕು. ಈ ಪ್ರಯತ್ನ ರಾಜಕೀಯಕ್ಕಿಂತ ಸಮಾಜದಿಂದಲೇ ಆರಂಭವಾಗಬೇಕು ಎಂದು ಭಾಗವತ್ ಅಭಿಪ್ರಾಯಪಟ್ಟರು.

ಸ್ಥಳೀಯ ಮಟ್ಟದಲ್ಲಿ ಅಂತರಧರ್ಮೀಯ ಸಂವಾದ ಮತ್ತು ಜಂಟಿ ಸೇವಾ ಕಾರ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ. ಜನರು ಒಟ್ಟಾಗಿ ಕೆಲಸ ಮಾಡಲು ಆರಂಭಿಸಿದರೆ ಜಾಗತಿಕ ಪರಿಸ್ಥಿತಿಯಲ್ಲೂ ಬದಲಾವಣೆ ತರಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ನಾಯಕರು ದ್ವೇಷವನ್ನು ಎದುರಿಸುವುದು, ಕಿರುಕುಳಕ್ಕೊಳಗಾದ ಸಮುದಾಯಗಳನ್ನು ರಕ್ಷಿಸುವುದು, ಯುವಜನರಲ್ಲಿ ಸಹಬಾಳ್ವೆ ಬೆಳೆಸುವುದು ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನವನ್ನು ಮಾನವೀಯ ಮೌಲ್ಯಗಳ ಸೇವೆಯಲ್ಲಿ ಬಳಸುವ ಕುರಿತು ಹಲವು ಬದ್ಧತೆಗಳನ್ನು ವ್ಯಕ್ತಪಡಿಸಿದರು. ಭಾಗವಹಿಸಿದ ನಾಯಕರು ಪರಸ್ಪರ ರಾಖಿ ಕಟ್ಟಿಕೊಂಡು ಏಕತೆ ಮತ್ತು ಪರಸ್ಪರ ಜವಾಬ್ದಾರಿಯ ಸಂದೇಶ ಸಾರಿದರು.

Related posts