ಬೆಂಗಳೂರು: ಕಾನೂನು ಹೋರಾಟ ಹೇಗೆ ಮಾಡಬೇಕೆಂಬುದರ ಬಗ್ಗೆ ಅಡ್ವೋಕೇಟ್ ಜನರಲ್ ಅವರಿಗೆ ಬಿಟ್ಟಿದ್ದೇವೆ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಮನವಿ ಸಲ್ಲಿಸುತ್ತಿದ್ದೇವೆ. ಈಗಾಗಲೇ ನೀರು ಹರಿಸುವ ನಿರ್ಧಾರ ಮರು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ. ನಾವು ರೈತರ ಹಿತವನ್ನು ಕಾಯಬೇಕು. ಕೋರ್ಟ್ ನಿರ್ಧಾರಕ್ಕೂ ಆದ್ಯತೆ ನೀಡಬೇಕು ಎಂದರು.
ಬಿಜೆಪಿ ಹಾಗೂ ದಳದ ಸ್ನೇಹಿತರು ಈ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರಿಗೆ ತಮ್ಮ ಕಾಲದಲ್ಲಿ ಏನಾಗಿತ್ತು ಎಂಬ ಅರಿವಿಲ್ಲವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದೇ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದವರು ತಿಳಿಸಿದರು.”ಕಾವೇರಿ, ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದ, ರಾಜ್ಯದ ಅಣೆಕಟ್ಟೆಗಳಲ್ಲಿ ನೀರು ಪರಿಸ್ಥಿತಿ, ಕುರಿತು ಚರ್ಚಿಸಲು ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ಈ ಸಭೆಗೆ ಕೆಲವು ಸಂಸದರಿಗೂ ಆಹ್ವಾನ ನೀಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು..
ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಹಾಗೂ ರೈತರ ಹಿತ ಕಾಯುವುದು ನಮ್ಮ ಕರ್ತವ್ಯ. ರಾಜ್ಯದಲ್ಲಿನ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಈ ವಿಚಾರವಾಗಿ ನಾವು ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದರು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ತಡೆದು ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, “ಅದು ಅವರದೇ ರಸ್ತೆ ಅಲ್ಲವೇ. ಅಲ್ಲಿ ಅನೇಕ ಜೀವಗಳು ಬಲಿಯಾಗಿವೆ. ಅವರು ಹೋರಾಟ ಮಾಡಲಿ” ಎಂದರು.
ಆಯನೂರು ಮಂಜುನಾಥ ಅವರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, “ಅನೇಕ ಜನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಯಾರು ಯಾವ ಕಾರಣಕ್ಕೆ ಭೇಟಿ ಆಗುತ್ತಿದ್ದಾರೆ ಎಂದು ಹೇಳಲು ಸಾಧ್ಯವೇ? ಅವರವರ ಬದುಕು, ಭವಿಷ್ಯ ಅವರು ನೋಡಿಕೊಳ್ಳುತ್ತಾರೆ ಎಂದರು. ಸಿ.ಟಿ ರವಿ ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಕೈ ಕತ್ತರಿಸಲು ನಮಗೂ ಗೊತ್ತಿದೆ ಎಂದಿದ್ದಾರೆ. ಅವರು ಆಪರೇಶನ್ ಮಾಡಿದಾಗ ಏನಾಗಿತ್ತು? ಕಾಂಗ್ರೆಸ್, ದಳದ ಶಾಸಕರನ್ನು ಕರೆದುಕೊಂಡು ಮಜಾ ಮಾಡಲಿಲ್ಲವೇ? ಅವರು ರಾಜಕಾರಣ ಮಾಡಲಿ. ನೀವು ಏನು ಬೆದರಿಕೆ ಹಾಕುತ್ತೀರಿ ಅದನ್ನು ಬೇರೆಯವರು ಮಾಡಲು ಆಗುವುದಿಲ್ಲವೇ? ನೀವು ಮೈತ್ರಿ ಸರ್ಕಾರ ಬೀಳಿಸಿ ಅಧಿಕಾರ ತೆಗೆಯಲಿಲ್ಲವೆ? ನಮಗಿರುವ ಸಂಖ್ಯಾಬಲಕ್ಕೆ ಯಾರ ಅಗತ್ಯವೂ ಇಲ್ಲ. ದೇಶ, ರಾಜ್ಯದ ಉದ್ದಗಲ ರಾಷ್ಟ್ರ ಉಳಿಸಲು ಜನ ತೀರ್ಮಾನಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಬರುವವರನ್ನು ಬೇಡ ಎನ್ನಲು ಸಾಧ್ಯವೇ? ಗೂಳಿ ಕೇಳಿ ಹಸು ಕಟ್ಟಬೇಕೆ?”ಎಂದು ತಿಳಿಸಿದರು.
ನಾಳೆ ಗ್ರಾಮ ಪಂಚಾಯ್ತಿ ಹಾಗೂ ಪಾಲಿಕೆ ಸದಸ್ಯರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಕೇಳಿದಾಗ, “ನನಗೆ ಇನ್ನೂ ಅರ್ಜಿಗಳು ಬಂದಿಲ್ಲ. ಬಂದ ನಂತರ ನಿಮಗೆ ಮಾಹಿತಿ ನೀಡುತ್ತೇನೆ” ಎಂದು ಹೇಳಿದರು.
ಎರಡು ವರ್ಷಗಳ ನಂತರ ಮಂತ್ರಿ ಮಂಡಲ ಬದಲಾವಣೆ ಬಗ್ಗೆ ಮುನಿಯಪ್ಪ ಅವರ ಹೇಳಿಕೆ ವಿಚಾರವಾಗಿ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, “ಪಕ್ಷ ಏನು ಹೇಳುತ್ತದೆ ಅದಕ್ಕೆ ಎಲ್ಲರೂ ಬದ್ಧರಾಗಬೇಕು. ಈ ವಿಚಾರ ಪಕ್ಷಕ್ಕೆ ಸಂಬಂಧಿಸಿದ್ದು, ಯಾರೂ ಬಹಿರಂಗ ಚರ್ಚೆ ಮಾಡಬಾರದು” ಎಂದು ತಿಳಿಸಿದರು.