ಕ್ಷೀರ ಸಂಜೀವಿನಿ: ಮಹಿಳಾ ಹೈನುಗಾರರಿಗೆ ಬಮೂಲ್‌ನಿಂದ 2.5 ಲಕ್ಷ ರೂ. ಬಡ್ಡಿ ರಹಿತ ಸಾಲ

ದೊಡ್ಡಬಳ್ಳಾಪುರ: ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ದೃಷ್ಟಿಯಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ಕಣಿವೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 10 ಜನ ಸದಸ್ಯರಿಗೆ ಹೈನುಗಾರಿಕೆಗೆ ಉತ್ತೇಜನ ನೀಡಲು ಸಾಲದ ರೂಪದಲ್ಲಿ ಬಡ್ಡಿ ರಹಿತವಾಗಿ ತಲಾ ರೂ.25,000 ರೂಗಳ ಚೆಕ್ ಗಳನ್ನು ಕ್ಷೀರ ಸಂಜೀವಿನಿ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ ಎಂದು ಬಮೂಲ್ ನಿರ್ದೆಶಕ ಬಿ.ಸಿ ಆನಂದ್ ಕುಮಾರ್ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಕಣಿವೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕ್ಷೀರ ಸಂಜೀವಿನಿ ಯೋಜನೆಯಡಿ ಈ ಸಾಲವನ್ನು ಒಂದು ವರ್ಷದ ಅವಧಿಯವರೆಗೆ ಬಡ್ಡಿ ರಹಿತವಾಗಿ ನೀಡಲಾಗುತ್ತದೆ. ಸಾಲ ಪಡೆದ ಫಲಾನುಭವಿಯು ತಾವು ಸಾಲ ಪಡೆದ ಸಂಘಕ್ಕೆ ಹಾಲು ಪೂರೈಸುವ ಮೂಲಕ ಪ್ರತೀ ತಿಂಗಳು ಎರಡು ಸಾವಿರದಂತೆ ಸಂಘದ ಮೂಲಕ ಒಕ್ಕೂಟಕ್ಕೆ ಮರುಪಾವತಿ ಮಾಡಬೇಕಾಗಿದ್ದು, ಕ್ಷೀರ ಸಂಜೀವಿನಿ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ವರ್ಷದ ಅವಧಿಯೊಳಗೆ ಯಶಸ್ವಿಯಾಗಿ ತಾವು ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ್ದಲ್ಲಿ ಅದೇ ಸಂಘದ ಸದಸ್ಯತ್ವ ಹೊಂದಿದ ಇನ್ನುಳಿದ ಹಾಲು ಉತ್ಪಾದಕ ಫಲಾನುಭವಿಗಳಿಗೆ 25,000 ರೂ. ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುವುದು ಎಂದರು. ಗ್ರಾಮೀಣ ಭಾಗದಲ್ಲಿ ಅದರಲ್ಲಿಯೂ ಅತೀ ಮುಖ್ಯವಾಗಿ ಹೈನುಗಾರಿಕೆಯ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಕ್ಷೀರ ಸಂಜೀವಿನಿ ಯೋಜನೆಯು ಅತ್ಯಂತ ಸಹಾಯಕವಾಗಿದ್ದು, ಈ ಯೋಜನೆಯನ್ನು ಗ್ರಾಮೀಣ ಭಾಗದ ಮಹಿಳೆಯರು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಯಶಸ್ವಿ ಹೈನುಗಾರರಾಗಬೇಕೆಂದು ಅವರು ಕರೆ ನೀಡಿದರು.

ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಎಲ್.ಬಿ ನಾಗರಾಜು ಮಾತನಾಡಿ ಮಹಿಳೆಯರ ವೃತ್ತಿ ಕೌಶಲತೆ ಅಭಿವೃದ್ಧಿ ಪಡಿಸುವುದು. ಹೈನೋದ್ಯಮದಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಕ್ಷೀರ ಸಂಜೀವಿನಿ ಯೋಜನೆ ನೆರವು ಒದಗಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಆದಾಯ ಹೆಚ್ಚಿಸುವ ಸಲುವಾಗಿ ಮಹಿಳೆಯರನ್ನು ಸಂಘಟಿಸಿ, ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ರಚಿಸುವುದು, ವೃತ್ತಿಯಲ್ಲಿ ನೈಪುಣ್ಯತೆ ಪಡೆಯಲು ವೃತ್ತಿ ತರಬೇತಿ ನೀಡುವುದು, ಹೈನುಗಾರಿಕೆಯಂಥ ಆದಾಯ ತರುವ ಚಟುವಟಿಕೆ ಹಮ್ಮಿಕೊಳ್ಳಲು ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವುದು, ಉತ್ಪಾದಿತ ಹಾಲಿಗೆ ನಿರಂತರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಮೂಲಕ ಮಹಿಳೆಯರ ಅಭ್ಯುದಯ ಸಾಧಿಸುವುದು, ಕಾನೂನು ಅರಿವು, ಪೌಷ್ಟಿಕ ಆಹಾರ, ಆರೋಗ್ಯ ಪಾಲನೆ ಇತ್ಯಾದಿ ಶಿಬಿರ ನಡೆಸುವುದರ ಮೂಲಕ ಮಹಿಳೆಯರಲ್ಲಿ ನಾಯಕತ್ವಗುಣ ಬೆಳೆಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು ಈ ಕ್ಷೀರ ಸಂಜೀವಿಜಿ ಯೋಜನೆಯಲ್ಲಿದೆ ಎಂದರು.

ದೊಡ್ಡಬಳ್ಳಾಪುರದ ಕಣಿವೆಪುರ ಗ್ರಾಮದ ಮಹಿಳಾ ಹಾಲು ಉತ್ಪಾದಕ ಸಹಕಾರಿ ಸಂಘದ ಮಹಿಳಾ ಸದಸ್ಯರಿಗೆ ಸಾಲದ ಚೆಕ್ ಗಳನ್ನು ಬಮೂಲ್ ನಿರ್ದೆಶಕ ಬಿ.ಸಿ ಆನಂದ್ ಕುಮಾರ್ ವಿತರಣೆ ಮಾಡಿದರು. ಡೇರಿ ವ್ಯವಸ್ಥಾಪಕ ಎಲ್.ಬಿ ನಾಗರಾಜು, ವಿಸ್ತರಾಣಾಧಿಕಾರಿ ಅನಿತಾ, ಮುಖಂಡರಾದ ಶ್ರೀನಿವಾಸ್, ಸಂಘದ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಸದಸ್ಯರು ಇದ್ದರು.

Related posts