ಕುದ್ರೋಳಿ ದಸರಾ: ಭೂಗತ ವಿದ್ಯುತ್ ಕೇಬಲ್ ಯೋಜನೆಗೆ ಮಂಜೂರಾತಿ, ಸ್ಪೀಕರ್’ಗೆ ಪದ್ಮರಾಜ್ ಅಭಿನಂದನೆ

ಮಂಗಳೂರು: ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ವಿದ್ಯುತ್‌ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ ಅಡಚಣೆಯುಂಟುಮಾಡುತ್ತಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಭೂಗತ ಕೇಬಲ್ ಅಳವಡಿಸುವ ರೂ. 67 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಗೆ ರಾಜ್ಯ ಸರ್ಕಾರವು ಮಂಜೂರಾತಿ ನೀಡಿದೆ.

ಪ್ರತಿ ವರ್ಷ ಮಂಗಳೂರು ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಾಲು ಸಾಲಾಗಿ ಸಾಗುವ ಎತ್ತರದ ಸ್ತಬ್ಧಚಿತ್ರಗಳು ಮತ್ತು ರಥಗಳಿಗೆ ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳು ದೊಡ್ಡ ಅಡಚಣೆಯಾಗಿದ್ದವು. ಸುರಕ್ಷತೆಯ ದೃಷ್ಟಿಯಿಂದ ಮೆರವಣಿಗೆಯ ಸಮಯದಲ್ಲಿ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ಗಂಭೀರ ಸಮಸ್ಯೆಯನ್ನು ಮನಗಂಡ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯವರು ಕರ್ನಾಟಕ ವಿಧಾನ ಸಭಾಧ್ಯಕ್ಷರುಗಳಾದ ಶ್ರೀ ಯು.ಟಿ.ಖಾದರ್ ಫರೀದ್‌ʼರವರ ಮೂಲಕ ಈ ಬಗ್ಗೆ ಸರ್ಕಾರಕ್ಕೆ ವಿಶೇಷ ಮನವಿಯನ್ನು ಸಲ್ಲಿಸಿತ್ತು.

ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಯು.ಟಿ. ಖಾದರ್ ಫರೀದ್ ರವರು ಆಲಿಸಿ, ಇದನ್ನು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವನ್ನಾಗಿ ನೋಡದೆ ಮಂಗಳೂರಿನ ಘನತೆಯ ಪ್ರಶ್ನೆಯಾಗಿ ಸ್ವೀಕರಿಸಿ, ಇಂಧನ ಸಚಿವರೊಂದಿಗೆ ಸತತ ಸಂಪರ್ಕವನ್ನು ಸಾಧಿಸಿ, ಬೃಹತ್ ಯೋಜನೆಗೆ ಅನುಮೋದನೆ ದೊರಕಿಸಿಕೊಡುವಲ್ಲಿ ಅವರು ವಹಿಸಿದ ಪಾತ್ರ ಅಮೋಘ. ಟೆಂಡರ್ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಿ, ಕಾಮಗಾರಿಯ ಆರಂಭಕ್ಕೆ ಹಸಿರು ನಿಶಾನೆ ತೋರುವ ಮೂಲಕ ತಮ್ಮ ‘ಕಾರ್ಯದಕ್ಷತೆ’ಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ

ಈ ಐತಿಹಾಸಿಕ ಯೋಜನೆಯ ಜಾರಿಗೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರುಗಳಾದ ಶ್ರೀ ಯು.ಟಿ. ಖಾದರ್ ಫರೀದ್, ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್,ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಮಂಜುನಾಥ ಭಂಡಾರಿ, ಮೆಸ್ಕಾಂ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಅಪಘಾತಗಳ ಭಯವಿಲ್ಲದೆ ಮೆರವಣಿಗೆ ಸುಗಮವಾಗಿ ಸಾಗಲಿದ್ದು, ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗುವ ಸಮಸ್ಯೆಗೂ ಮುಕ್ತಿ ಸಿಗಲಿದೆ. ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ವಿದ್ಯುತ್ ತಂತಿಗಳ ಜಾಲವಿಲ್ಲದೆ ಮಂಗಳೂರು ನಗರವು ಮತ್ತಷ್ಟು ಸುಂದರವಾಗಿ ಕಂಗೊಳಿಸಲಿದೆ. ಈ ಮಹತ್ವದ ಕಾಮಗಾರಿಯು ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Related posts