ಅಂದು ಈಶ್ವರಪ್ಪ ತಲೆದಂಡಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ! ಈಗ ಶರಣ ಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುತ್ತಾರ?

ಬೆಂಗಳೂರು: ಕಲಬುರಗಿ ಜಿಲ್ಲೆ ಶಿರೋಳ್ಳಿ ಗ್ರಾಮದಲ್ಲಿನ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿವ ಶರಣ್ ಪ್ರಕಾಶ್ ಪಾಟೀಲ್ ಮೇಲಿನ ಆರೋಪವು ಸಿಎಂ ಸಿದ್ದರಾಮಯ್ಯ ಅವರಿಗೂ ಸವಾಲೆಂಬಂತಾಗಿದೆ.

ತನ್ನ ಸಾವಿಗೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕಾರಣ ಎಂಬ ಶಿವಕುಮಾರ್ ಆಡಿಯೋ ವೈರಲ್ ಆಗಿದ್ದು, ತಮ್ಮ ಪಕ್ಷದ ಕಾರ್ಯಕರ್ತನ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರೂ ರೊಚ್ಚಿಗೆದ್ದಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರನೊಬ್ಬ ಡೆತ್ ನೋಟ್‌ನಲ್ಲಿ ಈಶ್ವರಪ್ಪ ಹೆಸರು ಉಲ್ಲೇಖಿಸಿದ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಪಟ್ಟುಹಿಡಿದಿದ್ದರು. ಒತ್ತಡಕ್ಕೆ ಮಣಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪರ ರಾಜೀನಾಮೆ ಪಡೆದಿದ್ದರು. ಇದೀಗ ಅದೇ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ದವೂ ಆರೋಪ ಕೇಳಿಬಂದಿದೆ. ಅದರಲ್ಲೂ ಸಾವಿಗೆ ಶರಣಾಗುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನದೇ ಧ್ವನಿಯಲ್ಲಿ ಸಚಿವರ ವಿರುದ್ದ ಆರೋಪ ಹೊರಿಸಿದ್ದಾನೆ. ಹಾಗಾಗಿ ಮಂತ್ರಿ ಶರಣ್ ಪ್ರಕಾಶ್ ಪಾಟೀಲ್ ವಿಚಾರ ಸಿಎಂ ಸಿದ್ದರಾಮಯ್ಯ ಅವರಿಗೂ ನುಂಗಲಾರದ ತುಪ್ಪದಂತಾಗಿದೆ.

ಈ ನಡುವೆ, ಶಿವಕುಮಾರ್ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ಸಚಿವ ಸ್ಥಾನದಿಂದ ಶರಣಪ್ರಕಾಶ್ ಪಾಟೀಲ್ ಅವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಎನ್. ರವಿಕುಮಾರ್ ಪ್ರತಿಕ್ರಿಯಿಸಿ, ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಸಾವಿಗೆ ಮುನ್ನ ಆಡಿಯೋದಲ್ಲಿ ಶಿವಕುಮಾರ್ ಹೇಳಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಮತ್ತು ತನಿಖಾ ವರದಿ ಬರುವವರೆಗೆ ಸಚಿವರು ಸಂಪುಟದಿಂದ ಹೊರಗುಳಿಯಬೇಕು ಎಂದು ಆಗ್ರಹಿಸಿದ್ದಾರೆ.

Related posts