ವಲಸೆ ಕಾರ್ಮಿಕರಿಗೆ ಇದೆಂತಾ ಶಿಕ್ಷೆ? ಕಣ್ಣಿದ್ದೂ ಕುರುಡಾಯಿತೇ ಸರ್ಕಾರ?

ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದು, ಅನೇಕರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಕೊರೋನಾ ಸೈನಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು..? ಕೆಲವೊಮ್ಮೆ ಅವರೂ ಕೂಡಾ ಕಣ್ಣಿದ್ದು ಕುರುಡರಂತಾಗುತ್ತಾರೆ ಎಂಬುದಕ್ಕೆ ಈ ವಲಸೆ ಕಾರ್ಮಿಕರ ಕಣ್ಣೀರ ಕಥೆ ಉದಾಹರಣೆಯಾಗಿದೆ.

ಕಳೆದ 3 ದಿನಗಳಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಕಾಲಿ ಗ್ರಾಮದ ಭೀಮಾ ಸೇತುವೆಯ ಅಡಿಯಲ್ಲಿ ಕರ್ನಾಟಕದ 14 ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

  • ಚಿಕ್ಕಮಗಳೂರು ಜಿಲ್ಲೆಯ 10 ಮಂದಿ
  • ಶಿವಮೊಗ್ಗ ಜಿಲ್ಲೆಯ ಇಬ್ಬರು
  • ರಾಮನಗರ ಜಿಲ್ಲೆಯ ಒಬ್ಬರು
  • ಕಾರವಾರ ಜಿಲ್ಲೆಯ ಒಬ್ಬರು

ಕೆಲಸ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಕನ್ನಡಿಗ ವಲಸೆ ಕಾರ್ಮಿಕರು ಲಾಕ್’ಡೌನ್ ಘೋಷಣೆಯಾದ ನಂತರ ಅತಂತ್ರರಾದರು. ಹಾಗಾಗಿ ತವರಿನತ್ತ ಮುಖ ಮಾಡಿದ ಇವರು ಮಹಾರಾಷ್ಟ್ರದ ಲಾಥೂರ್’ನಿಂದ ಕರ್ನಾಟಕಕ್ಕೆ ತೆರಳಿದ್ದರು. ಮಾರ್ಚ್ 28 ರಿಂದ ಮಾರ್ಚ್ 31 ರವರೆಗೆ 184 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗಿದ ಇವರನ್ನು ತಕಾಲಿಯಲ್ಲಿ ತಡೆದು ನಿಲ್ಲಿಸಲಾಯಿತು. ಮಾರ್ಚ್ 31 ರಿಂದ ಮೇ 3 ರವರೆಗೆ ತಕಾಲಿ ಕೇಂದ್ರದಲ್ಲಿ 34 ದಿನಗಳವರೆಗೆ ಇವರನ್ನು ಕೋರಂಟೈನ್’ನಲ್ಲಿಡಲಾಯಿತಂತೆ.

ಕೋರಂಟೈನ್’ನಿಂದ ಬಿಡುಗಡೆಯಾದ ಈ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಅಲ್ಲಿಂದ ಮತ್ತೆ ಕಾಲ್ನಡಿಗೆಯಲ್ಲೇ ಸಾಗಿದ ಈ ಕಾರ್ಮಿಕರನ್ನು ದಾರಿ ಮಧ್ಯೆ, ಮತ್ತೆ ತಡೆದು ನಿಲ್ಲಿಸಲಾಗಿದೆ. ಮುಂದೇನು ಎಂದು ದಿಕ್ಕು ತೋಚದಂತಾಗಿ ಈ ಶ್ರಮಿಕ ಸಮೂಹ ಕಳೆದ 3-4 ದಿನಗಳಿಂದ ಭೀಮಾ ನದಿ ಸೇತುವೆಯ ಅಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಮಳೆ ಗಾಳಿ ಹೊಡೆತವನ್ನೂ ಸಹಿಸಿ ದಿನಕಳೆಯುತ್ತಿದ್ದಾರೆ.

ಈ ವಲಸೆ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಗಮನಹರಿಸಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ವಲಸೆ ಕಾರ್ಮಿಕರಿಗೆ ಅವರರವರ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಈ ನಡುವೆ ಈ ವಲಸೆ ಕಾರ್ಮಿಕರನ್ನು ತಮ್ಮ ಜಿಲ್ಲೆಗೆ ಕರೆಸಿಕೊಳ್ಳಲು ಚಿಕ್ಕಮಗಳೂರು ಜಿಲ್ಲಾಡಳಿತ ಸಿದ್ದವಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಈ ಕುರಿತಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಈ ವಲಸೆ ಕಾರ್ಮಿಕರ ಸಾರಿಗೆ ಶುಲ್ಕವನ್ನು ಭರಿಸಲು ತಮ್ಮ ಸಂಘಟನೆ ಸಿದ್ಧವಾಗಿದೆ. ಶೋಚನೀಯ ಸ್ಥಿತಿಯಲ್ಲಿರುವ ತಮ್ಮ ಜಿಲ್ಲೆಯ ಕಾರ್ಮಿಕರನ್ನು ಕರೆಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ.. ಹೆಣಗಳ ಪಕ್ಕದಲ್ಲೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ; ಭಾರತದಲ್ಲೂ ಅಮಾನವೀಯತೆ; ದೇಶವನ್ನೇ ಬೆಚ್ಚಿ ಬೀಳಿಸಿದ ವೀಡಿಯೋ

 

Related posts