ಬಿಜೆಪಿ ರಾಜ್ಯ ಕಾರ್ಯಕಾರಿಣಿ ; ಪೂರ್ ಸಿದ್ದತೆ ಪರಿಶೀಲಿಸಿದ ಸಚಿವ ಜಾರಕಿಹೊಳಿ‌

ಬೆಳಗಾವಿ: ಬೆಳಗಾವಿಯಲ್ಲಿ ಡಿಸೆಂಬರ್ 5ರಂದು ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಸಂಬಂಧಿಸಿದಂತೆ ಪೂರ್ವ ಸಿದ್ದತೆಗಳನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಪರಿಶೀಲಿಸಿದರು.

ಈ ಮಹತ್ವದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಕೇಂದ್ರೀಯ ವರಿಷ್ಠರೂ ಸಹಾ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ರಮೇಶ್ ಜಾರಕಿಹೊಳಿ‌ ಅವರು, ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್‌ ಪಾಟೀಲ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್, ಬಿಜೆಪಿ ಮುಖಂಡರಾದ ಕಿರಣ್ ಜಾಧವ್, ರಾಜು ಚಿಕ್ಕನಗೌಡ್ರು ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದರು.

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ತುರ್ತು ನವದೆಹಲಿಗೆ ತೆರಳಲಿದ್ದ ಸಚಿವ ರಮೇಶ್ ಜಾರಕಿಹೊಳಿ‌, ಅದಕ್ಕೂ ಮೊದಲು ಪಕ್ಷದ‌ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಅಚ್ಚುಕಟ್ಟಾಗಿ ರಾಜ್ಯ ಕಾರ್ಯಕಾರಿಣಿ ನಡೆಸಲು ಸೂಚನೆ ನೀಡಿದರು. ರಾಜ್ಯದ ಎಲ್ಲೆಡೆಯಿಂದ ವಿವಿಧ ಸ್ತರದ ನಾಯಕರು ಆಗಮಿಸುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಿ ಶಿಸ್ತಿನಿಂದ ಸಭೆ ಆಯೋಜಿಸುವಂತೆ ಸಚಿವ ಜಾರಕಿಹೊಳಿ‌ ತಿಳಿಸಿದರು.

ಇದೇ ಸಭೆಯಲ್ಲಿ ಬೆಳಗಾವಿ ಲೋಕಸಭಾ ಉಪ ಚುನಾವಣೆ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನ ಸಭಾ ಉಪಚುನಾವಣೆಗಳ ಗೆಲುವಿನ ರಣತಂತ್ರವನ್ನು‌ ನಿರ್ಧರಿಸುವ ಸಾಧ್ಯತೆಗಳಿವೆ.

Related posts