ತುಳು ಅಪ್ಪೆ ಕೂಟ ಮತ್ತು ಪೂವರಿ ಪತ್ರಿಕೆಯಿಂದ ತುಡರ ಪರ್ಬದ ಪೊಲಬು, ತುಳು ತಾಳಮದ್ದಳೆ ಕಾರ್ಯಕ್ರಮ.. ಕೃಷಿ ಸಂಸ್ಕೃತಿ ನಶಿಸುತ್ತಿದ್ದಂತೆ ಹಬ್ಬಗಳ ಸೊಗಡು ಮರೆಯಾಯಿತು ಎಂದ ಗಣ್ಯರು.. ಸಮಾರಂಭಕ್ಕೆ ಆಕರ್ಷಣೆ ತುಂಬಿದ ತಾಳಮದ್ದಳೆ ವೈಭವ..
ಮಂಗಳೂರು: ತುಳು ಪರಂಪರೆ, ಸಂಸ್ಕೃತಿ ವಿಚಾರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ತುಳುನಾಡಿನ ಸೊಗಡಿಗೆ ಶ್ರೀಮಂತಿಕೆ ತುಂಬುತ್ತಿರುವ ಏಕೈಕ ತುಳು ಮಾಸಿಕ ‘ಪೂವರಿ’ ಆಯೋಜಿಸಿದ ‘ತುಳು ಪರ್ಬೋ’ (ತುಳು ಹಬ್ಬ) ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ನಾಡು-ನುಡಿ-ವೈಭವ ಕುರಿತು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿ ಕುತೂಹಲದ ಕೇಂದ್ರಬಿಂದುವಾದರು.
ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯ ಪ್ರತಿಫಲನ ಹಬ್ಬಗಳ ಆಚರಣೆಯಲ್ಲಿ ಪ್ರತಿಫಲಿಸುತ್ತಿತ್ತು. ಆದರೆ ಇಂದು ಕೃಷಿ ನಾಶವಾಗಿ ಸಿಮೆಂಟ್ ನೆಲದಲ್ಲಿ ಹಣತೆ ಹಚ್ಚುವ ಅನಿವಾರ್ಯತೆ ನಮ್ಮದಾಗಿದೆ. ಆದರೂ ಮುಂದಿನ ತಲೆಮಾರಿಗೆ ನಮ್ಮ ಆಚರಣೆಗಳನ್ನು ತಿಳಿಸಲು ಇದು ಅನಿವಾರ್ಯ ಎಂದು ವಕೀಲ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.
ತುಳು ಅಪ್ಪೆ ಕೂಟ ಪುತ್ತೂರು ಹಾಗೂ ಪೂವರಿ ತುಳು ಪತ್ರಿಕೆಯ ಸಹಭಾಗಿತ್ವದಲ್ಲಿ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನಡೆದ ‘ತುಡರ ಪರ್ಬೊದ ಪೊಲಬು ಬೊಕ್ಕ ಸಂಜಯ ರಾಯಭಾರ’ ತುಳು ತಾಳಮದ್ದಳೆ ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಬಗ್ಗೆ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಹಾಗೂ ನಿವೃತ್ತ ಮುಖ್ಯಗುರುಗಳಾದ ಶಂಕರಿ ಪಟ್ಟೆ ಮಾತನಾಡಿ ದೀಪಾವಳಿ ದೀಪಗಳು ಈಗಾಗಲೇ ಮನೆಮನೆಗಳ ಬೆಳಗಿದೆ. ಈ ಕಾರ್ಯಕ್ರಮದಿಂದ ಮನಗಳು ಬೆಳಗಿ ನಳನಳಿಸಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ರಿಜಿಸ್ಟಾರ್ ಚಂದ್ರಹಾಸ ರೈ ಬಿ. ‘ಪೂವರಿ’ ಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ತುಳು ಉಳಿಸುವ ಕೆಲಸ ತಾಯಿಯಿಂದ ಮೊದಲ್ಗೊಂಡಾಗಲೇ ಮಕ್ಕಳಲ್ಲಿ ತುಳು ಪ್ರೀತಿ ಬೆಳೆಯುವುದೆಂದು ಹೇಳಿದರು.
ವೇದಿಕೆಯಲ್ಲಿ ಕ್ಷೇತ್ರದ ಕಾರ್ಯದರ್ಶಿಗಳಾದ ವಿ.ಕೆ. ಶೆಟ್ಟಿ, ಪವಿತ್ರಪಾಣಿಗಳಾದ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ತುಳು ಅಪ್ಪೆ ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಜೆ. ಶೆಟ್ಟಿ ಸ್ವಾಗತಿಸಿ, ಪೂವರಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ವಂದಿಸಿದರು. ತುಳು ಅಪ್ಪೆ ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಪೂವರಿ ಪತ್ರಿಕೆಯ ಉಪ ಸಂಪಾದಕಿ ವಿದ್ಯಾಶ್ರೀ ಎಸ್ (ಶ್ರೀಶಾವಾಸವಿ ತುಳುನಾಡ್) ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ತುಳು ಅಪ್ಪೆಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ‘ಸಂಜಯ ರಾಯಭಾರ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರುಗಿತು. ಭಾಗವತರಾದ ಗೋವಿಂದ ನಾಯಕ್ ಹಾಗೂ ಅವರ ಶಿಷ್ಯವೃಂದ ಹಿಮ್ಮೇಳದಲ್ಲಿ ಸಹಕರಿಸಿದರು.