ಬೋರ್‌ವೆಲ್‌ನಲ್ಲಿ ಹಾಲು..! ಇದು ಕಲಿಯುಗದ ಪವಾಡ ಅಂತಿದ್ದಾರೆ ಜನ..!

ಕೊಳವೆ ಬಾವಿಯಲ್ಲಿ ನೀರು ಬುರುವುದು ಸಾಮಾನ್ಯ.. ಆದರೆ, ಬೋರ್‌ವೆಲ್‌ನಲ್ಲಿ ಹಾಲು ಬರಲು ಸಾಧ್ಯವೇ? ಕೊಳವೆ ಬಾವಿಯಲ್ಲಿ ನೀರಿನ ಬದಲು ಹಾಲು ಬರುತ್ತಿದೆ ಎಂಬ ಸುದ್ದಿ ಕುತೂಹಲದ ಕೇಂದ್ರ ಬಿಂದುವಾಗಿದೆ.

ಉತ್ತರ ಪ್ರದೇಶದ ಮೊರಾಬಾದ್‌ನಲ್ಲಿ ಬೋರ್‌ವೆಲ್‌ನಲ್ಲಿ ನೀರಿನ ಬದಲು ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ. ಇದನ್ನು ಕ್ಷೀರ ಕ್ರಾಂತಿ ಎನ್ನುತ್ತಿರುವ ಸ್ಥಳೀಯರು ‘ಕಲಿಯುಗದ ವಿಸ್ಮಯ’ ಎಂದು ಬಣ್ಣಿಸುತ್ತಿದ್ದಾರೆ.

ಈ ಬೋರ್‌ವೆಲ್ ಬಗ್ಗೆ ಸುದ್ದಿ ಹರಡುತ್ತಿದ್ದಂತೆಯೇ ಇದನ್ನು ನೋಡಲೆಂದು ಭಾರೀ ಸಂಖ್ಯೆಯಲ್ಲಿ ಜನ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬೋರ್‌ವೆಲ್‌ನಲ್ಲಿ ಹಾಲು ಬರುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳೀಯರು ಕ್ಯಾನ್, ಪಾತ್ರೆಗಳೊಂದಿಗೆ ಧಾವಿಸಿ ಹಾಲು ರೂಪದ ನೀರನ್ನು ಹೊತ್ತೊಯ್ಯುವ ಪ್ರಸಂಗವೂ ಅಚ್ಚರಿಗೆ ಕಾರಣವಾಗಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೋರ್‌ವೆಲ್‌ನಲ್ಲಿ ಬರುತ್ತಿರುವುದು ಹಾಲಲ್ಲ, ಕಲುಷಿತ ನೀರು ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಸ್ಥಳೀಯರು ಅಧಿಕಾರಿಗಳ ಮಾತನ್ನು ನಂಬುತ್ತಿಲ್ಲ. ಈ ಸಂಬಂಧ ಮನವರಿಕೆ ಮಾಡುವ ಪ್ರಯತ್ನಕ್ಕಿಳಿದಿರುವ ಅಧಿಕಾರಿಗಳು, ಪರಿಶೀಲನಾ ವರದಿ ಬರುವವರೆಗೆ ಹಾಲು ರೀತಿಯ ನೀರನ್ನು ಬಳಸದಂತೆ ಮನವಿ ಮಾಡಿದ್ದಾರೆ.

Related posts