ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯ ಬಿಜೆಪಿ ಮತ್ತಷ್ಟು ಹೀನಾಯ ಸ್ಥಿತಿಗೆ; ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯವರ ಹಣೆ ಬರಹಕ್ಕೆ ಎಂದಿಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಅವರ ಸ್ಥಿತಿಯನ್ನು ನೋಡಿದರೆ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೋಚರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ನಾಯಕರ ನಡೆ ಬಗ್ಗೆ ಶೆಟ್ಟರ್ ಆಕ್ರೋಶ ಹೊರಹಾಕಿದರು. ಬಿಜೆಪಿಯ ಆಂತರಿಕ ಸಮಸ್ಯೆಗಳನ್ನು ಗಮನಿಸಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಇನ್ನಷ್ಟು ದಯನೀಯ ಸ್ಥಿತಿಗೆ ತಲುಪಲಿದೆ ಎಂದು ವಿಶ್ಲೇಷಿಸಿದರು.

ಬಿಜೆಪಿಯವರು ತಮ್ಮ ವಿರುದ್ಧ ಸಣ್ಣ ಮಟ್ಟದ ಟೀಕೆಗೆ ಮುಂದಾಗಿರುವುದಕ್ಕೆ ಅಸನಾಧಾನ ಹೊರಹಾಕಿದ ಅವರು, ನಾನು ಅಷ್ಟು ಸಣ್ಣ ಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯವರು ಮುಂದಿನ ದಿನಗಳಲ್ಲಿ ಇನ್ನೇನು ಆಗಲಿದ್ದಾರೆ ನೋಡುತ್ತಾ ಇರಿ ಎಂದರು.

ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಜೆಪಿಯವರಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದವರು ಹೇಳಿದರು. ಉಚಿತ ಯೋಜನೆಗಳಿಂದಾಗಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಒಂದುಕಡೆ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಹೋರಾಟಕ್ಕೆ ಇಳಿಯುವುದಾಗಿ ಹೇಳುವ ಮೂಲಕ ದ್ವಂದ್ವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಟೀಕಿಸಿದ ಶೆಟ್ಟರ್, ಬಿಜೆಪಿಯವರು ಮೊದಲು ತಮ್ಮ ಗೊಂದಲವನ್ನು ಸರಿಪಡಿಸಿಕೊಳ್ಳಲಿ ಎಂದು ಕುಟುಕಿದರು.

Related posts