ಸೋಮಣ್ಣ ಅವರು BJP ರಾಜ್ಯಾಧ್ಯಕ್ಷ ಆಗ್ತಾರ? ಚರ್ಚೆಗೆ ಪೀಠಿಕೆ ಹಾಕಿದ್ರಾ ಕಟೀಲ್..?

ಬಳ್ಳಾರಿ: ವಿಧಾನಸಭಾ ಚುನಾವಣೆಯಲ್ಲಿನ ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿರುವ ನಳೀನ್ ಕುಮಾರ್ ಕಟೀಲ್, ಹಿರಿಯ ನಾಯಕರಾಗಿರು ಮಾಜಿ ಸಚಿವ ವಿ.ಸೋಮಣ್ಣ ಅವರಿ, ಪಕ್ಷದ ರಾಜ್ಯಾಧ್ಯಕ್ಷ ಕೇಳುವುದು ತಪ್ಪಲ್ಲ ಎಂದಿದ್ದಾರೆ‌. ಈ ಮೂಲಕ ಸೋಮಣ್ಣ ಅವರು ಮುಂದಿನ ರಾಜ್ಯಾಧ್ಯಕ್ಷರಾಗುವರೇ ಎಂಬ ಚರ್ಚೆಗೆ ನಳಿನ್ ಕುಮಾರ್ ಪೀಠಿಕೆ ಹಾಕಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ ಒಂಭತ್ತು ವರ್ಷ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದೇವೆ. ಭಯೋತ್ಪಾದನಾ ಚಟುವಟಿಕೆ ಶೇ 80 ಕಡಿಮೆ ಆಗಿದೆ. ನಕ್ಸಲ್ ಹಾಗೂ ಆತಂಕವಾದ ನಿರ್ಮೂಲನೆಯಾಗಿದೆ‌ ಎಂದು ಮೋದಿ ಸರ್ಕಾರದ ಕ್ರಮಗಳ ಬಗ್ಗೆ ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರದ ನಿರಂತರವಾಗಿ 5 ಕೆಜಿ ಅಕ್ಕಿ ಕೊಡುತ್ತೆ. ದೇಶದ ಎಲ್ಲಾ ರಾಜ್ಯಗಳಿಗೆ ಅಕ್ಕಿ ಕೊಡುತ್ತೆ. ಬರ ಮತ್ತು ನೆರೆ ಬಂದಾಗ ವಿತರಿಸಲು ಕೇಂದ್ರ ಅಕ್ಕಿ ಸಂಗ್ರಹ ಮಾಡುತ್ತೆ ಎಂದ ಅವರು, ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದ್ದು, ಗ್ಯಾರೆಂಟಿ ಕಾರ್ಡ್‌ಗಳಿಂದ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದರು.

ಒಳ ಒಪ್ಪಂದದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಒಳ ಒಪ್ಪಂದದ ಹೇಳಿಕೆ ನೀಡಿದವರನ್ನು ಕರೆದು ಅಭಿಪ್ರಾಯ ಕೇಳಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿಯಿಂದ ಲಿಂಗಾಯಿತರ ಕಡೆಗಣನೆ ಆರೋಪದ ಬಗ್ಗೆಯೂ ಅವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಲಿಂಗಾಯತರು ಹಾಗೂ ಬಿಎಸ್ ವೈ ರನ್ನ ಕಡೆಗಣನೆ ಮಾಡಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಮಾಡಿದ್ದು, ಬಿಎಸ್ ವೈ, ಬೊಮ್ಮಾಯಿ ಅವರನ್ನ ಬಿಜೆಪಿ ಸಿಎಂ ಮಾಡಿದೆ ಎಂದರಲ್ಲದೆ, ಲಿಂಗಾಯತರು ಮತ್ತೆ ಸಿಎಂ ಆಗಬೇಕಾದ್ರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ನನ್ನ ಅವಧಿ ಮುಕ್ತಾಯವಾಗಿದೆ. ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆ ನಡೆಯುತ್ತದೆ. ನೈತಿಕವಾಗಿ ನಾನು ಜವಾಬ್ದಾರಿ ಹೊತ್ತಿದ್ದೇನೆ ಎಂದ ಅವರು, ಸೋಮಣ್ಣ ಹಿರಿಯ ನಾಯಕರು,ಪಕ್ಷದ ರಾಜ್ಯಾಧ್ಯಕ್ಷ ಕೇಳುವುದು ತಪ್ಪಲ್ಲ ಎಂದು ಹೇಳುವ ಮೂಲಕ ಹೊಸ ಸಾರಥಿ ಆಯ್ಕೆ ಕುರಿತ ಚರ್ಚೆಗೆ ಪೀಠಿಕೆ ಹಾಕಿದ ವೈಖರಿಯೂ ಬಿಜೆಪಿಯಲ್ಲಿನ ಬೆಳವಣಿಗೆಗಳಿಗೆ ರೋಚಕತೆ ತುಂಬಿದೆ.

Related posts