ರಾಮನಗರ: ಕಾಂಗ್ರೆಸ್ ಸರಕಾರದ ವಿರುದ್ಧ ಪರ್ಸಂಟೇಜ್ ಆರೋಪ ಮಾಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರು ತಮ್ಮ ಆರೋಪಗಳ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಿ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ,: ಹಿಂದೆ ಇದೇ ಜನ ಬಿಜೆಪಿ ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದರು. ಆ ಆರೋಪವನ್ನು ಅವರು ಸಾಬೀತು ಮಾಡಿದ್ದರಾ? ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರಾ? ಈಗ ನೋಡಿದರೆ ನನಗೆ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಈಗ ಕಾಂಗ್ರೆಸ್ ನವರದ್ದೇ ಸರ್ಕಾರ ಇದೆ. 40% ವಿಚಾರವನ್ನು ತನಿಖೆ ಮಾಡಿಸಲಿ, ಸತ್ಯ ಜನರ ಮುಂದೆ ಇಡಲಿ. ಆರೋಪ ಮಾಡಿದವರ ಬಳಿ ಸಾಕ್ಷ್ಯ ಇರಲೇಬೇಕಲ್ಲವೇ? ಗುತ್ತಿಗೆದಾರರ ಸಂಘದವರು ದೂರು ಕೊಟ್ಟಿದ್ದರಲ್ಲ, ಅವರು ಸಾಕ್ಷಿ ಇಟ್ಟಿದ್ರಾ.? ಲೋಕಾಯುಕ್ತಕ್ಕೆ ದೂರು ನೀಡಲು ಅಡ್ಡಿ ಮಾಡಿದ್ದವರು ಯಾರು? ಎಂದು ಅವರು ಪ್ರಶ್ನಿಸಿದರು.
ಕಳೆದ ಮೇ 8 ರಂದು ಮಹಾನಗರ ಪಾಲಿಕೆಯಲ್ಲಿ 675 ಕೋಟಿ LOC ಹಣವನ್ನ ಯಾಕೆ ರಿಲೀಸ್ ಮಾಡಿಲ್ಲ? ಅದನ್ನು ಯಾಕೆ ಇಟ್ಟುಕೊಂಡಿದ್ದೀರಿ? ಅದರ ಬಗ್ಗೆ ನೀವು ಮೊದಲು ಜನತೆಗೆ ಹೇಳಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.