KSRTC ಬಸ್‌ಗೆ ಲಾರಿ ಡಿಕ್ಕಿ; ಮಹಿಳೆಯ ಬಲಗೈ ತುಂಡು..

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದ ‘ಶಕ್ತಿ’ ಯೋಜನೆ ಜನಪ್ರಿಯವಾಗುತ್ತಿರುವಂತೆಯೇ, ಕೆಲವೊಂದು ಕಹಿ ಸನ್ನಿವೇಶಗಳು ವ್ಯವಸ್ಥೆಗೆ ಸವಾಲೆಂಬಂತಾಗಿದೆ. ಈ ನಡುವೆ, ಮಂಡ್ಯ ಸಮೀಪ ನಡೆದಿರುವ ಅವಘಡ ಕುರಿತಂತೆ ಅಂತೆ-ಕಂತೆಗಳು ಹುಟ್ಟಿಕೊಂಡಿವೆ.

ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್‌ನಲ್ಲಿ ಕಿಟಕಿ ಮೂಲಕ ಹತ್ತೋವಾಗ ಅವಘಡ ಸಂಭವಿಸಿ ಮಹಿಳೆಯೊಬ್ಬರು ಕೈ ಕಳೆದುಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಗಾಯಾಳು ಮಹಿಳೆಯ ಪರದಾಟದ ವೀಡಿಯೋ ಮನಕಲುವಂತಿದೆ.

ಈ ನಡುವೆ, ಈ ಘಟನೆ ಬಗ್ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟನೆ ನೀಡಿದೆ. ಬಸ್‌ನಲ್ಲಿ ಕಿಟಕಿ ಮೂಲಕ ಹತ್ತುತ್ತಿದ್ದ ಮಹಿಳೆಗೆ ಗಾಯವಾಗಿದೆ ಎಂಬುದು ಸುಳ್ಳು ಸುದ್ದಿ ಎಂದಿರುವ KSRTC ಇದು ಅಪಘಾತದಿಂದಾದ ಘಟನೆ ಎಂದು ಸ್ಪಷ್ಟಪಡಿಸಿದೆ.

ಏನಿದು ಘಟನೆ..?

ಜೂನ್ 18ರಂದು ಕೆಎಸ್ಸಾರ್ಟಿಸಿ ಚಾಮರಾಜನಗರ ವಿಭಾಗದ ಬಸ್ಸು ನಂಜನಗೂಡಿನಿಂದ ಟಿ.ನರಸೀಪುರಕ್ಕೆ ಕಾರ್ಯಚರಣೆ ಮಾಡುತ್ತಿರುವಾಗ, ಮಧ್ಯಾಹ್ನ1.45ರ ಸುಮಾರಿಗೆ ಬಸವರಾಜಪುರ ಬಳಿ, ಲಾರಿಯೊಂದು ಡಿಕ್ಕಿಯಾಗಿದೆ. ಆ ವೇಳೆ, ಬಸ್ಸಿನ ಕಿಟಕಿಯ ಬಳಿ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ. ಈ ಪೈಕಿ ಹೆಚ್.ಡಿ.ಕೋಟೆ ಮೂಲದ ಶಾಂತ ಕುಮಾರಿ ಎಂಬವರ ಬಲಗೈ ತುಂಡಾಗಿದೆ ಹಾಗೂ ಹುಲ್ಲಹಳ್ಳಿಯವರೆನ್ನಲಾದ  ರಾಜಮ್ಮ ಎಂಬವರ ಬಲಗೈಗೆ ತೀವ್ರ ಪೆಟ್ಟಾಗಿದೆ.

ಈ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆಯೇ, ನಿಗಮದ ಅಧಿಕಾರಿಗಳು ಸ್ಥಳ ಧಾವಿಸಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಗಾಯಾಳುಗಳು ಚೇತರಿಸಿಕೊಂಡಿದ್ದು, ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಿಗಮವು ಭರಿಸುತ್ತಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ಅಪಘಾತಕ್ಕೆ ಕಾರಣವಾಗಿರುವ ಲಾರಿ ಚಾಲಕನ ವಿರುಧ್ಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಎಫ್‌ಐ.ಆರ್ ದಾಖಲಾಗಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

Related posts