ಮೈಸೂರು: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9ನೇ ದಿನವಾದ ಇಂದು ಎಲ್ಲೆಲ್ಲೂ ಆಯುಧ ಪೂಜೆಯ ಸಡಗರ ಗರಿಗೆದರಿದೆ. ಶಸ್ತ್ರಗಳಿಗೆ ಪೂಜೆಯಷ್ಟೇ ಅಲ್ಲ, ಯಂತ್ರಗಳಿಗೆ, ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ.
ದಸರಾ ಖ್ಯಾತಿಯ ಮೈಸೂರಿನಲ್ಲೂ ಆಯುಧ ಪೂಜೆ ಕೈಂಕರ್ಯ ಗಮನಸೆಳೆದಿದೆ. ಮೈಸೂರು ಅರಮನೆಯಲ್ಲಿ ಅರಸರ ಕಾಲದ ಆಯುಧಗಳಿಗೆ ಪೂಜೆ ನೆರವೇರುವುವುದು ಇಲ್ಲಿಯದೇ ಆದ ವಿಶೇಷ. ಯಧುವಂಶದ ಕುವರ ಯಧುವೀರ್ ಒಡೆಯರ್ ಉಪಸ್ಥಿತಿ ಕೂಡಾ ಗಮನಾರ್ಹ.
ಇದೇ ವೇಳೆ ಮೈಸೂರು ದಸರಾದಲ್ಲಿ ಜಗತ್ತಿನ ಗಮನ ಕೇಂದ್ರೀಕರಿಸುವ ಜಂಬೂಸವಾರಿ ಮೆರವಣಿಗೆಗೂ ಸಕಲ ತಯಾರಿ ನಡೆದಿದೆ. ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅಕ್ಟೊಬರ್ 24) ನಡೆಯಲಿದ್ದು, ಅಂತಿಮ ಹಂತದ ತಯಾರಿ ನಡೆದಿವೆ.. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುವ ಸ್ತಬ್ಧಚಿತ್ರಗಳು ಜೊತೆಯಲ್ಲೇ ಗಜಪಡೆಗಳು ನಾಡಿನ ಅಧಿದೇವತೆ ಚಾಮುಂಡಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ‘ರಾಜಪಥ’ದಲ್ಲಿ ಸಾಗಲಿವೆ.
ಜಂಬೂಸವಾರಿ ಮೆರವಣಿಗೆ ತಯಾರಿ ಹೀಗಿದೆ:
ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿ ಮಂಗಳವಾರ ಮಧ್ಯಾಹ್ನ1.46ರಿಂದ 2.08ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ.
ಅಂಬಾವಿಲಾಸ ಅರಮನೆ ಬಳಿ ಸಂಜೆ 4.40ರಿಂದ 5ರ ನಡುವೆ ವಿಜಯದಶಮಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವರಾದ ಶಿವರಾಜ್ ತಂಗಡಗಿ, ಕೆ. ವೆಂಕಟೇಶ್, ಮೇಯರ್ ಶಿವಕುಮಾರ್ ಸಹಿತ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಲಕ್ಷಾಂತರ ಜನರು ಜಂಬೂಸವಾರಿ ಮೆರವಣಿಗೆ ವೀಕ್ಷಿಸುವ ಸಾಧ್ಯತೆಗಳಿವೆ.
ಜಂಬೂಸವಾರಿ ಮೆರವಣಿಗೆ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಅಂಬಾರಿ ಹೊರಲಿರುವ ‘ಅಭಿಮನ್ಯು’ ನೇತೃತ್ವದಲ್ಲಿ 14 ಆನೆಗಳನ್ನು ಸಜ್ಜುಗೊಳಿಸಲಾಗುತ್ತಿದೆ.