‘ಭಾರತಾಂಬೆ’ಯಾಗಿ ಗಮನಸೆಳೆದ ‘ಶ್ರೀ ಕಟೀಲೇಶ್ವರಿ’; ಕರಾವಳಿಯ ಪುಣ್ಯಕ್ಷೇತ್ರದಲ್ಲಿ ವಿಶೇಷ ರೀತಿ ಸ್ವಾತಂತ್ರ್ಯೋತ್ಸವ

ಮಂಗಳೂರು: ಜಗದಾಂಬೆ ಶ್ರೀ ಕಟೀಲೇಶ್ವರಿ ಇಂದು ಭಾರತಾಂಭೆಯಾಗಿ ಗಮನಸೆಳೆದದ್ದು ವಿಶೇಷ. ಸ್ವಾತಂತ್ರ್ಯೋತ್ಸವ ದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ವಿಗ್ರಹವು ರಾಷ್ಟ್ರಧ್ವಜದ ಬಣ್ಣದ ವಸ್ತ್ರಾಲಂಕಾರದಿಂದ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿತ್ತು.

ಕರಾವಳಿಯ ಪುಣ್ಯಕ್ಷೇತ್ರ ಕಟೀಲಿನಲ್ಲೂ ದೇಶಭಕ್ತಿಯ ಮಹಾ ಹಬ್ಬವನ್ನು ಆಚರಿಸಲಾಯಿತು. ಹಿಂದೂ ಧಾರ್ಮಿಕ ಹಬ್ಬಗಳಂದು ವಿಶೇಷ ಕೈಂಕರ್ಯಗಳಿಂದ ಭಕ್ತರನ್ನು ಕೈಬೀಸಿ ಕರೆಯುವ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಈ ರೀತಿಯ ಆಕರ್ಷಣೆ ಕಂಡುಬಂತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅನುವಂಶೀಯ ಹಿರಿಯ ಅರ್ಚಕರಾದ ಅನಂತ ಆಸ್ರಣ್ಣ ಅವರ ಪುತ್ರ ಶ್ರೀಕರ ಆಸ್ರಣ್ಣ ಅವರ ಕೈಚಳಕದಿಂದಾಗಿ ದೇವಿ ಇಂದು ಭಾರತ ಮಾತೆಯಾಗಿ ಕಂಗೊಳಿಸಿದ್ದಾಳೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಶ್ರೀಕರ ಆಸ್ರಣ್ಣ ಅವರು ಈ ರೀತಿಯ ಅಲಂಕಾರ ಮಾಡಿ ಕೈಂಕರ್ಯ ನೆರವೇರಿಸುತ್ತಿದ್ದಾರೆ ಎಂದು ಅನಂತ ಆಸ್ರಣ್ಣ ತಿಳಿಸಿದ್ದಾರೆ. 

https://www.youtube.com/watch?v=2A912hJMCdU&feature=youtu.be

ವಿಶೇಷ ರೀತಿ ಸ್ವಾತಂತ್ರ್ಯೋತ್ಸವ:

ಶ್ರೀ ಕ್ಷೇತ್ರ ಕಟೀಲಿನ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವೂ ಗಮನಸೆಳೆಯಿತು. ದೇವಳದ ಅರ್ಚಕವೃಂದದ ಜೊತೆ ಕಟೀಲು ಕ್ಷೇತ್ರದ ಆನೆಯೂ ಭಾಗಿಯಾಗಿ ಕಾರ್ಯಕ್ರಮಕ್ಕೆ ಆಕರ್ಷಣೆ ತುಂಬಿತು. ಧ್ವಜಾರೋಹಣ ಸಂದರ್ಭದಲ್ಲಿ ಈ ಆನೆ ಕೂಡಾ ರಾಷ್ಟ್ರಧ್ವಜವನ್ನು ಎತ್ತಿಹಿಡಿದು ಕುತೂಹಲದ ಕೇಂದ್ರಬಿಂದುವಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು, ಅತಿಥಿ ಅಭ್ಯಾಗತರು ಈ ಸನ್ನಿವೇಶ ಕಂಡು ಮೂಕವಿಸ್ಮಿತರಾದರು.
ಕಟೀಲು ದೇವಸ್ಥಾನ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆಗೈದ ವೀರ ಯೋಧರ ಭಾಗವಹಿಸುವಿಕೆ ಕೂಡಾ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಅರ್ಥಪೂರ್ಣಗೊಳಿಸಿತು.

Related posts