ದೆಹಲಿ: ದೇಶದಲ್ಲಿ ಕರೋನಾ ಸೃಷ್ಟಿಸಿದ ಕಂಪನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇನ್ನೇನು ಕೊರೋನಾ ಸೋಂಕು ಹತೋಟಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ಕೇರಳದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಈ ಕೋವಿಡ್-19 ವೈರಾಣು ಬಳಿ ಪಡೆದಿದೆ. ಈ ಮೂಲಕ ದೇಶದಲ್ಲಿ ವೈರಸ್’ಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಕೇರಳದ ತಿರುವನಂತಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 68 ವರ್ಷ ಪ್ರಾಯದ ಅಬ್ದುಲ್ ಅಜೀಜ್ ಎಂಬವರು ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರವಷ್ಟೇ ಇವರಲ್ಲಿ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ವೆಂಟಿಲೇಟರ್’ನಲ್ಲಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಕೇರಳದಲ್ಲಿ ಎರಡನೇ ಸಾವು ಪ್ರಕರಣವಾಗಿದೆ.
ಇದೇ ವೇಳೆ ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ನಲ್ಲಿ ಕೊರೋನಾಕ್ಕೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಈ ನಡುವೆ ಸೋಮವಾರ ಒಂದೇ ದಿನ ದೇಶದಲ್ಲಿ 227ಕ್ಕೂ ಹೆಚ್ಚು ಹೊಸ ಸೋಂಕಿತರ ಪ್ರಕರಣ ಗೊತ್ತಾಗಿದೆ.
• ಮಹಾರಾಷ್ಟ್ರದಲ್ಲಿ 50 ಪ್ರಕರಣ,
• ಕೇರಳದಲ್ಲಿ 32 ಪ್ರಕರಣ
• ದೆಹಲಿಯಲ್ಲಿ 25 ಪ್ರಕರಣ
• ಉತ್ತರಪ್ರದೇಶದಲ್ಲಿ 24 ಪ್ರಕರಣ
• ತೆಲಂಗಾಣದಲ್ಲಿ 11 ಪ್ರಕರಣ
• ಜಮ್ಮು-ಕಾಶ್ಮೀರದಲ್ಲಿ 11 ಪ್ರಕರಣ
• ಕರ್ನಾಟಕದಲ್ಲಿ 7 ಪ್ರಕರಣ
ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 1251ಕ್ಕೆ ಏರಿಕೆಯಾಗಿದೆ.
ಅತ್ತ, ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲೇಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ಮಾರ್ಚ್ 13-15ರವರೆ ಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತೆಲಂಗಾಣದ 6 ಮಂದಿ ಮಹಾಮಾರಿ ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿದ್ದ 200 ಮಂದಿಯನ್ನು ಐಸೋಲೇಷನ್ ನಲ್ಲಿರಿಸಲಾಗಿದ್ದು, ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲ ಮಸೀದಿ ಸುತ್ತಮುತ್ತ ನೆಲೆಸಿದ್ದ 1,000ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.