ರೇಸ್‌ಕೋರ್ಸ್‌ನಲ್ಲಿ ರಂಪಾಟ; ಕುದುರೆ ಅಂಗಳದಲ್ಲಿ ಪ್ರೇಕ್ಷಕರ ದಾಂಧಲೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಶ್ರೀಮಂತರ ಮೋಜಿನ ತಾಣ ರೇಸ್‌ಕೋರ್ಸ್‌ನಲ್ಲಿ ರಂಪಾಟವೇ ನಡೆದಿದೆ. ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿರುವ ರೇಸ್‌ಕೋರ್ಸ್‌ನಲ್ಲಿ ನಡೆದ ಹಠಾತ್ ಪ್ರತಿಭಟನೆ ಆ ರೇಸಿನ ಆಂಗ್ಲಾವನ್ನು ರಣರಂಗವಾಗಿಸಿತು.

ರೇಸ್ ರದ್ದುಗೊಂಡಿದ್ದಕ್ಕೆ ಕುಪಿತಗೊಂಡ ಜೂಜುಕೋರರು, ರೇಸ್ ಕಚೇರಿಯ ಕೌಂಟರ್, ಕುರ್ಚಿ, ಮೇಜು, ಟಿವಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಘಟನೆ ನಡೆದದ್ದು ಯಾಕೆ?

ಶುಕ್ರವಾರದಂದು ಮೊದಲ ರೇಸ್ ವೇಳೆ ಎರಡು ಕುದುರೆ ಮತ್ತು ಜಾಕಿಗಳು ಬಿದ್ದು ಗಾಯಗೊಂಡವು. ಈ ಘಟನೆ ಹಿನ್ನೆಲೆಯಲ್ಲಿ ಎಲ್ಲ ರೇಸ್‌ಗಳನ್ನು ರದ್ದುಗೊಳಿಸಲಾಯಿತು. ರೇಸ್ ಕೋರ್ಸ್ ಆಡಳಿತ ಮಂಡಳಿಯ ಈ ನಿರ್ಧಾರ ಅಲ್ಲಿ ನೆರೆದಿದ್ದ ಜನರನ್ನು ಸಿಟ್ಟಾಗಿಸಿತು. ರೊಚ್ಚಿಗೆದ್ದ ನೂರಾರು ಜನ ಕುರ್ಚಿ, ಮೇಜು, ಟಿವಿ, ಕೌಂಟರ್‌ಗಳನ್ನು ಧ್ವಂಸಗೊಳಿಸಿದ್ದಾರೆ.

ರೇಸ್‌ನಲ್ಲಿ ಹಣ ಕಳೆದುಕೊಂಡಿದ್ದ ಜೂಜುಕೋರರೇ ಈ ದಾಂದಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.  ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts