ಗಡಿ ವಿಚಾರ; ಮಹಾರಾಷ್ಟ್ರ ಸಿಎಂಗೆ ಹೆಚ್ಡಿಕೆ ಪಾಠ

ಬೆಂಗಳೂರು: ಬೆಳಗಾವಿ ಗಡಿ ವಿಚಾರ ಕುರಿತಂತೆ ಮಹಾರಾಷ್ಟ್ರ ಸರ್ಕಾರವನ್ನು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗಡಿ ವಿಚಾರ ಕುರಿತಂತೆ ಚರಿತ್ರೆಯನ್ನು ಓದಿ ಎಂದು ಅವರು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಗೆ ಹೆಚ್ಡಿಕೆ ಪಾಠ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮಹಾರಾಷ್ಟ್ರದ ಹಠದಿಂದಲೇ ರಚನೆಯಾದ ಮಹಾಜನ ಸಮಿತಿ ವರದಿಯಲ್ಲಿ ಬೆಳಗಾವಿ ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಒಪ್ಪದ ಮಹಾರಾಷ್ಟ್ರ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿರುವ ಪ್ರಕರಣವೊಂದರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತಾಡುತ್ತಿರುವ ಉದ್ಧವ ಠಾಕ್ರೆ, ವಿಚಾರಣೆಯ ದಿಕ್ಕನ್ನೇ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಚೀನಾದಂತೆ ಮಾತನಾಡುವುದನ್ನು ಮೊದಲು ಬಿಡಬೇಕು. ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಅವರ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಬಾರದು. ಗಡಿ ಎಂದ ಮೇಲೆ ಅದು ಎರಡು ಭಾಷೆ, ಎರಡೂ ರಾಜ್ಯಗಳ ಜನರ ಸಂಗಮ. ಅದರಲ್ಲಿ ನಮ್ಮವರೇ ಹೆಚ್ಚು, ನಾವೇ ಶಕ್ತಿವಂತರು ಎಂಬ ವಾದ ಸರಿಯಲ್ಲ ಎಂದವರು ಹೇಳಿದ್ದಾರೆ.

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂದಾಗ ಠಾಕ್ರೆಗೆ ಒಂದು ಸಲಹೆ ನೀಡಿದ್ದೆ. ಕರ್ನಾಟಕ-ಮಹಾರಾಷ್ಟ್ರದ ಇತಿಹಾಸ ಓದಬೇಕೆಂಬುದು ಆ ಸಲಹೆ ಆಗಿತ್ತು. ಚರಿತ್ರೆ ಓದಿದ್ದರೆ ಮಹಾರಾಷ್ಟ್ರವು ಕನ್ನಡರಸರಿಂದ ಆಳಿಸಿಕೊಂಡ ನಾಡು ಎಂಬುದು ಅವರಿಗೂ ತಿಳಿಯುತ್ತಿತ್ತು. ಅವರು ಓದಿದಂತೆ ಕಾಣುತ್ತಿಲ್ಲ. ಚರಿತ್ರೆ ಓದಿ ಎಂದು ಅವರು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಯತ್ತ ಬಾಣ ಪ್ರಯೋಗಿಸಿದ್ದಾರೆ.

Related posts