ಕನ್ನಡ ಚಿತ್ರರಂಗದ ಹಾಸ್ಯ ನಟ ಮೈಕಲ್ ಇನ್ನಿಲ್ಲ; ಕಂಬನಿಯ ಮಹಾಪೂರ

ಬೆಂಗಳೂರು: ಕನ್ನಡ ಸಿನಿಲೋಕದ ಮತ್ತೊಂದು ಹಾಸ್ಯ ರತ್ನ ಕಳಚಿದೆ. ಕನ್ನಡದ ಹಾಸ್ಯ ನಟ ಮೈಕೆಲ್​ ಮಧು ಅವರ ಅಗಲಿಕೆ ಬರ ಸಿಡಿಲಿನಂತೆ ಬಡಿದಿದೆ.

ಸ್ಯಾಂಡಲ್​ವುಡ್​ನ ಹಾಸ್ಯ ನಟ ಮೈಕೆಲ್​ ಮಧು ಇಹಲೋಕ ತ್ಯಜಿಸಿದ್ದಾರೆ. ಅವರು ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಮಧುಮೇಹದಿಂದ ಬಳಲುತ್ತಿದ್ದ ಅವರು ಬುಧವಾರ ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.

50 ವರ್ಷದ ಈ ಹಾಸ್ಯ ನಟ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಓಂ, ಎಕೆ 47, ಯಜಮಾನ ಚಿತ್ರಗಳು ಇವರ ಸಿನಿ ಪಯಣವನ್ನು ಖ್ಯಾತಿಯತ್ತ ಕೊಂಡೊಯ್ಯಲು ಕಾರಣವಾಗಿತ್ತು. ಅಂಬರೀಷ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಸಹಿತ ಕನ್ನಡ ಚಿತ್ರರಂಗದ ಖ್ಯಾತ ನಟರ ಜೊತೆ ಬೆಳ್ಳಿ ತೆರೆ ಹಂಚಿಕೊಂಡಿದ್ದರು.

ಇದೀಗ ಈ ನಟನ ನಿಧನದಿಂದಾಗಿ ಕನ್ನಡ ಸಿನಿ ಜಗತ್ತು ಬಡವಾಗಿದೆ. ಹಾಸ್ಯ ನಟ ಮೈಕೆಲ್​ ಮಧು ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಭಾರತೀಯ ಸಿನಿಮಾ ಕ್ಷೇತ್ರಕ್ಕೆ 2020 ಸೂತಕದ ವರ್ಷವೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಈ ವರ್ಷಾರಂಭದಿಂದ ಅನೇಕ ಸಿನಿಮಾ ದಿಗ್ಗಜರನ್ನು ಕಳೆದುಕೊಂಡಿದ್ದೇವೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಸ್ಟಾರ್’ಗಳಾದ ಇರ್ಫಾನ್​ ಖಾನ್, ರಿಷಿ ಕಪೂರ್​ ವಿಧಿವಶರಾಗಿದ್ದರು. ಖ್ಯಾತ ಹಾಸ್ಯ ನಟ ಬುಲೆಟ್​ ಪ್ರಕಾಶ್​ ನಿಧಾನದಿಂದಲೂ ಕನ್ನಡ ಚಿತ್ರರಂಗದಲ್ಲಿ ಸೂತಕ ಆವರಿಸಿಕೊಂಡಿತ್ತು. ಇದೀಗ ಸಿನಿಮಾ ಲೋಕದ ಮತ್ತೊಬ್ಬ ಕಲಾವಿದ ಅಗಲಿದ್ದಾರೆ.

Related posts