ಕೊರೋನಾ ಭೀತಿಯ ಸುಳಿಯಲ್ಲಿ ವೈದ್ಯರು; ಬಹುತೇಕ ಕ್ಲಿನಿಕ್’ಗಳು ಬಂದ್

ಬೆಂಗಳೂರು: ಕೊರೋನಾ ವೈರಸ್’ನ ರುದ್ರ ನರ್ತನಕ್ಕೆ ಇಡೀ ವೈದ್ಯಕೀಯ ಲೋಕವೇ ನಲುಗಿದೆ. ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು ಅನೇಕ ವೈದ್ಯರೇ ಮೃತಪಟ್ಟಿದ್ದಾರೆ. ಈ ಬೆಳವಣಿಗೆಯಿಂದಾಗಿ ನಮ್ಮ ದೇಶದಲ್ಲೂ ವೈದ್ಯರು ಆತಂಕಕ್ಕೊಳಗಾಗಿದ್ದಾರೆ.

ಕರ್ನಾಟಕದಲ್ಲೂ ಕೊರೋನಾ ವೈರಸ್ ಆತಂಕದ ಕಾರ್ಮೋಡ ಕವಿದಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಿವೆ. ಅದರಲ್ಲೂ ಕಲುಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಂತರ ಕ್ಲಿನಿಕ್’ಗಳನ್ನೂ ತೆರೆದಿಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ರಾಜ್ಯದ ಬಹುತೇಕ ಕಡೆ ಕ್ಲಿನಿಕ್’ಗಳು ಅಘೋಷಿತವಾಗಿ ಬಂದ್ ಆಗಿವೆ. ವೈದ್ಯರ ಸೇವೆ ಮೇಲೂ ಕೊರೊನಾ ಸೋಂಕು ಅಡ್ಡ ಪರಿಣಾಮ ಬೀರುತ್ತದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ವೈದ್ಯರು ತಮ್ಮ ಸೇವೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆನ್ನಲಾಗಿದೆ.

ಕೆಲವು ಖಾಸಗಿ ಕ್ಲಿನಿಕ್‌ಗಳು, ಕಿರು ನರ್ಸಿಂಗ್‌ ಹೋಮ್‌ಗಳ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದಾರೆ. ಕೊರೋನಾ ವೈರಸ್ ಸೋಂಕು ಹೆಚ್ಚಾಗಿ ಕಂಡು ಬಂದಿರುವ ಬೆಂಗಳೂರು, ಕಲಬುರಗಿ, ಹಾಸನ, ದಾವಣಗೆರೆ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಖಾಸಗಿ ಕ್ಲಿನಿಕ್’ಗಳು ಮುಚ್ಚಿವೆ.

Related posts