ಮೋದಿ ಆಪ್ತ, ಅಜಾತಶತ್ರು, ಮಾಜಿ ಸಚಿವ ಇನ್ನಿಲ್ಲ

ಕೇಂದ್ರದ ಮಾಜಿ ಸಚಿವ, ಮೌಲ್ಯಾಧಾರಿತ ರಾಜಕಾರಣಿ ಎಂದೇ ಗುರುತಾಗಿದ್ದ ಮುತ್ಸದ್ದಿ ನಾಯಕ ಸಚಿವ ಎಂ.ವಿ ರಾಜಶೇಖರನ್ ಇನ್ನು ನೆನಪು ಮಾತ್ರ.

ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಎಂ.ವಿ ರಾಜಶೇಖರನ್ ವಿಧಿವಶರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ, ಅವರು ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

92 ವರ್ಷ ಹರೆಯದ ಸಚಿವ ಎಂ.ವಿ ರಾಜಶೇಖರನ್, ಈ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯಸಭಾ ಸದಸ್ಯರಾಗಿ ರಾಜ್ಯವನ್ನು ಪ್ರತಿನಿಧಿಸಿದ್ದ ಅವರು ಜನಸ್ನೇಹಿ ರಾಜಕಾರಣಿ ಎಂದೇ ಗುರುತಾಗಿದ್ದರು. ಮೋದಿ ಆಪ್ತರೂ ಆಗಿದ್ದ ಅವರು, ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಸಾಧನೆಯನ್ನು ಹೋಗಲಿ ಕಾಂಗ್ರೆಸ್ ನಲ್ಲಿ ಸಂಚಲನ ಉಂಟು ಮಾಡಿದ್ದರು

ಎಂ.ವಿ ರಾಜಶೇಖರನ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಎಂ.ವಿ. ರಾಜಶೇಖರನ್ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ನಾಯಕರಲ್ಲಿ ಒಬ್ಬರು. ಪಕ್ಷಕ್ಕೆ ಅವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಯ ಸದಸ್ಯರಾಗಿದ್ದ ಅವರ ಪಕ್ಷನಿಷ್ಠೆ ಆದರ್ಶನೀಯ ಎಂದು ಡಿ.ಕೆ.ಶಿ. ಬಣ್ಣಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ನಿಧಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು ಎಂದು ಬಣ್ಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು ಎಂದು ಯಡಿಯೂರಪ್ಪ ಸ್ಮರಿಸಿದ್ದಾರೆ.

Related posts