ಉಚಿತ ಪ್ರಯಾಣದ ವೇಳೆ ಮಹಿಳೆಯರ ಅನುಚಿತ ವರ್ತನೆ; KSRTC ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಏನಾಗುತ್ತೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ

ಬೆಂಗಳೂರು: ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಯಾದ ನಂತರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದೇ ವೇಳೆ, ಅಹಿತಕರ ಘಟನೆಗಳೂ ಆಗಾಗ್ಗೆ ವರದಿಯಾಗುತ್ತಿವೆ. ಈ ನಡುವೆ ಬಸ್ ನಿಲ್ಲುವ ವಿಚಾರದಲ್ಲಿ ಕೆಲವು ಕಿಡಿಗೇಡಿಗಳು ಸಾರಿಗೆ ಬಸ್‌ನ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾಹಲಕ್ಕೆ ಕಾರಣವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಯದುರ್ಗ – ಬೆಂಗಳೂರು ಅಂತರರಾಜ್ಯ ಮಾರ್ಗದ ಬಸ್‌ನಲ್ಲಿ ಕೆಲವು ಮಹಿಳೆಯರು ನಿರ್ವಾಹಕರೊಂದಿಗೆ ಕಿರಿಕ್ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರು “ಶಕ್ತಿ” ಯೋಜನೆಯಡಿಯಲ್ಲಿ ಈ ಬಸ್‌ನಲ್ಲೂ ಪ್ರಯಾಣಿಸಲು ಅವಕಾಶವಿದೆ. ಇದನ್ನೇ ನೆಪವಾಗಿಟ್ಟು ಬಸ್ ಹತ್ತಿರುವ ಕೆಲವು ಮಹಿಳೆಯರು ಗಲಾಟೆ ಮಾಡಿದ್ದು, ಅವರ ಬೆಂಬಲಕ್ಕೆ ನಿಂತ ಯುವಕರೂ ಬಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ?

ದಿನಾಂಕ 20/06/2023 ರಂದು ಬೆಳಿಗ್ಗೆ 6.30 ಗಂಟೆಗೆ , ಓರ್ವ ಮಹಿಳಾ ಪ್ರಯಾಣಿಕರು ಚಳ್ಳಕೆರೆಯಿಂದ ದಾಬಸ್‌ಪೇಟೆಗೆ ಪ್ರಯಾಣ ಮಾಡಬೇಕಾಗಿದ್ದು, ‌ಚಳ್ಳಕೆರೆಯಲ್ಲಿ ಈ ಬಸ್ಸಿಗೆ ಹತ್ತಿ, ದಾಬಸ್ ಪೇಟೆಗೆ ಹೋಗಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ ಇದು ಅಂತರ ರಾಜ್ಯ ವಾಹನವಾಗಿದ್ದು, ದಾಬಸ್ ಪೇಟೆ ಬಳಿ ನಿಲುಗಡೆ‌ ಇರುವುದಿಲ್ಲ, ತುಮಕೂರಿಗೆ ಬೇಕಾದರೆ ತೆರಳಿ, ಅಲ್ಲಿಂದ ಬೇರೆ ವಾಹನದಲ್ಲಿ ಹೋಗಬಹುದು ಎಂದು ನಿರ್ವಾಹಕರು ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ಮಹಿಳೆಯು ಹಿರಿಯೂರಿಗೆ ಟಿಕೇಟ್ ಕೊಡಿ, ಅಲ್ಲಿಂದ ಬೇರೆ ಬಸ್ಸಿನಲ್ಲಿ ದಾಬಸ್ ಪೇಟೆಗೆ ಪ್ರಯಾಣಿಸುವುದಾಗಿ ಹೇಳಿದ್ದಾರೆ. ಆದರೆ ಹಿರಿಯೂರಿನಲ್ಲಿ ಇಳಿಯದೆ, ಮತ್ತೊಮ್ಮೆ ತುಮಕೂರಿಗೆ ಟಿಕೆಟ್ ಪಡೆದಿದ್ದಾರೆ. ತುಮಕೂರಿನಲ್ಲಿಯೂ ಇಳಿಯದೆ, ಬಸ್ಸಿನೊಳಗೆ ಎಲ್ಲಾ ಪ್ರಯಾಣಿಕರ‌ ಮುಂದೆ ತನ್ನ ಚಪ್ಪಲಿಯನ್ನು ತೆಗೆದುಕೊಂಡು ನಾನು ಇಲ್ಲಿ ಇಳಿಯುವುದಿಲ್ಲ ನೀನು ದಾಬಸ್ ಪೇಟೆಗೆ ಹೋಗಬೇಕು ಅಲ್ಲಿಯೇ ನಾನು‌ ಇಳಿಯುವುದು ‌ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾಗಿದೆ‌. ಮಹಿಳೆ ಎಂಬ ಕಾರಣಕ್ಕೆ ನಿರ್ವಾಹಕರು ನಿಲುಗಡೆ ಇಲ್ಲದಿದ್ದರೂ ಸಹ ದಾಬಸ್‌ಪೇಟೆಯ ಫ್ಲೆ ಓವರ್ ಹತ್ತಿರ, ಚಾಲಕರಿಗೆ ತಿಳಿಸಿ ನಿಲುಗಡೆ ನೀಡಿ ಮಹಿಳೆಯನ್ನು ಇಳಿಸಿದ್ದಾರೆ.

ಈ ವಿವಾದ ಸುಖಾಂತ್ಯಗೊಂಡಿದೆ ಎಂದು ಅಂದುಕೊಂಡರೆ, ಇಂದು ( 22-06-2023) ಬೆಳಗ್ಗೆ 6.30ರ ಸುಮಾರಿಗೆ ಮತ್ತೆ ಇದೇ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಅದೇ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಚಳ್ಳಕೆರೆ ಸರ್ಕಲ್‌ನಲ್ಲಿ, ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಮಹಿಳೆಯ ಕಡೆಯವರೆನ್ನಲಾದ ಮೂವರು, ನಿರ್ವಾಹಕನ ಮೇಲೆ ಏಕಾಏಕಿ ದಾಳಿಮಾಡಿ, ಮನಸೋಇಚ್ಛೆ ಹಲ್ಲೆ‌ ಮಾಡಿದ್ದಾರೆ. ಇದನ್ನು ಗಮನಿಸಿದ ಚಾಲಕರು‌‌ ನಿರ್ವಾಹಕರ ನೆರವಿಗೆ ಧಾವಿಸಿದ್ದು, ಅವರ ಮೇಲೂ ಸಹ ಹಲ್ಲೆ‌ ನಡೆದಿದೆ.

ಕೂಡಲೇ ಚಾಲಕ ಮತ್ತು ನಿರ್ವಾಹಕರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ನಿಗಮದ ವತಿಯಿಂದ ದೂರು ದಾಖಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ನಿಗಮದ ಚಾಲನಾ ಸಿಬ್ಬಂದಿಗೆ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚನೆ ಹಾಗೂ ತಿಳುವಳಿಕೆ ನೀಡಲಾಗಿದೆ. ಅದೇ ರೀತಿ ಪ್ರಯಾಣಿಕರು ಸಹ ಚಾಲನಾ ಸಿಬ್ಬಂದಿಗಳೊಂದಿಗೆ ಸಹಕರಿಸಲು ನಿಗಮದ ಅಧಿಕಾರಿಗಳು ಕೋರಿದ್ದಾರೆ.

Related posts