ಜನರಿಗೆ ಸಿಹಿ ಸುದ್ದಿ; ಬೆಳಿಗ್ಗೆಯಿಂದಲೇ ಇಂದಿರಾ ಕ್ಯಾಂಟೀನ್’ನಲ್ಲಿ ಉಚಿತ ಊಟ ತಿಂಡಿ

ಬೆಂಗಳೂರು: ಕೊರೋನಾ ಹಾವಳಿಯಿಂದ ನಲುಗಿ ಸಂಕಷ್ಟಕ್ಕೀಡಾಗಿರುವ ಬೆಂಗಳೂರು ಜನರಿಗೆ ಸಿಹಿ ಸುದ್ದಿ. ಈ ವರೆಗೂ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಆರಂಭ. ಅದೂ ಕೂಡಾ ಸಾರ್ವಜನಿಕರಿಗೆ ಉಚಿತವಾಗಿ ಫುಡ್ ಸಪ್ಲೈ.

ಕೋವಿಡ್-19 ವೈರಾಣು ಹಾವಳಿ ನಾಡಿನ ಜನರಲ್ಲಿ ಭೀತಿ ಆವರಿಸುವಂತೆ ಮಾಡಿದೆ. ಹಲವರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದು ಈ ವೈರಾಣು ಶರವೇಗದಲ್ಲಿ ಹರಡುತ್ತಿವೆ. ಈ ಕಾರಣದಿಂದಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶ ಹೊರಡಿಸಿದ್ದು, ಈ ವೇಳೆ ಹೋಟೆಲ್, ಮಳಿಗೆಗಳು ಮುಚ್ಚಿರಬೇಕಿದೆ. ಹಾಗಾಗಿ ಬೆಂಗಳೂರು ನಗರದ ಜನರಿಗೆ ಊಟದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನಿನಲ್ಲಿ ಉಚಿತ ಊಟ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. ಆದರೆ ಇಂದಿರಾ ಕ್ಯಾಂಟೀನ್ ಬಳಿ ಸಾವಿರಾರು ಮಂದಿ ಜಮಾಯಿಸಿ ಊಟ ತಿಂಡಿಗಾಗಿ ಮುಗಿಬಿದ್ದಿದ್ದರಿಂದಾಗಿ ನೂಕು ನುಗ್ಗಲು ಉಂಟಾಯಿತು. ಇದು ನಿಭಾಯಿಸಲಾಗದ ಸನ್ನಿವೇಶಕ್ಕೆ ಸಾಕ್ಷಿಯಾಯಿತಲ್ಲದೆ, ವೈರಾಣು ಹರಡಲು ಕಾರಣವೂ ಆಗಬಹುದೆಂಬ ಆತಂಕದಿಂದ ಇಂದಿರಾ ಕ್ಯಾಂಟೀನನ್ನೇ ಮುಚ್ಚಲು ಸರ್ಕಾರ ಆದೇಶ ನೀಡಿತು.

ಇಂದಿರಾ ಕ್ಯಾಂಟೀನ್ ಮತ್ತೆ ಕಾರ್ಯಾರಂಭ

ಸರ್ಕಾರದ ಈ ಕ್ರಮದಿಂದಾಗಿ ಬೆಂಗಳೂರಲ್ಲಿ ಸಾವಿರಾರು ಜನ ಊಟ ತಿಂಡಿ ಸಿಗದೇ ಹೈರಾಣಾಗಿದ್ದಾರೆ. ಈ ಬಗ್ಗೆ ಪ್ರಜ್ಞಾವಂತರು ನೀಡಿದ ಸಲಹೆಯನ್ನಾಧರಿಸಿ ಸರ್ಕಾರವು ಮತ್ತೆ ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಆದೇಶಿಸಿದೆ. ಗುರುವಾರ ಬೆಳಿಗ್ಗೆಯಿಂದಲೇ ಇಂದಿರಾ ಕ್ಯಾಂಟೀನ್’ಗಳಲ್ಲಿ ಊಟ ತಿಂಡಿ ಲಭ್ಯವಾಗಲಿದೆ ಎಂದು ಆಹಾರ ಪೂರೈಕೆ ಮಾಡುವ ಚೆಫ್ ಟಾಕ್  (Cheftalk Food & Hospitality Services) ಕಂಪೆನಿಯ ಮುಖ್ಯಸ್ಥ ಗೋವಿಂದ ಪೂಜಾರಿ ತಿಳಿಸಿದ್ದಾರೆ.

ಮೆನು ಬದಲಾವಣೆ

ಈವರೆಗೂ ಪ್ರತಿದಿನ ಬೆಳಿಗ್ಗೆ ಉಪಹಾರ,  ಮಧ್ಯಾಹ್ನ ಹಾಗೂ ಸಂಜೆ ಊಟ ಪೂರೈಕೆ ಮಾಡಲಾಗುತ್ತಿತ್ತು. ಪ್ರತೀ ಹೊತ್ತಿನಲ್ಲೂ ತಲಾ 70 ಸಾವಿರ ಮಂದಿಗೆ ಊಟ ತಿಂಡಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಗುರುವಾರದಿಂದ ಮೂರೂ ಹೊತ್ತು ತಲಾ 11 ಸಾವಿರ ರೈಸ್ ಬಾತ್ ಹಾಗೂ ಪಲಾವ್ ಪೂರೈಕೆ ಮಾಡಲು ಚೆಫ್ ಟಾಕ್ ಸಂಸ್ಥೆಗೆ ಸರ್ಕಾರ ಸೂಚಿಸಿದೆ. ರೈಸ್ ಬಾತ್ ಜೊತೆ ಚಟ್ನಿ ಹಾಗೂ ಪಲಾವ್ ಜೊತೆ ಗ್ರೇವಿ ಮತ್ತು ಸೂಕ್ತ ಡಿಶ್ ನೀಡಲಾಗುತ್ತೆ.  ಬೆಂಗಳೂರಿನ 33 ವಾರ್ಡ್’ಗಳಲ್ಲಿ ತಲಾ 200 ಪ್ಯಾಕೆಟ್’ಗಳಲ್ಲೂ ಈ ಆಹಾರ ವಿತರಿಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ 8 ಗಂಟೆ, ಮಧ್ಯಾಹ್ನ 12.30 ಹಾಗೂ ರಾತ್ರಿ 7.30ಕ್ಕೆ ಆಯ್ದ ಇಂದಿರಾ ಕ್ಯಾಂಟೀನ್’ಗಳಲ್ಲಿ ಈ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಗೋವಿಂದ ಪೂಜಾರಿ ಮಾಹಿತಿ ನೀಡಿದ್ದಾರೆ.

  • ಊಟ-ತಿಂಡಿ ಸಂಪೂರ್ಣ ಉಚಿತ
  • ಪ್ರತಿದಿನ ಬೆಳಿಗ್ಗೆ ಉಪಹಾರ
  • ಮಧ್ಯಾಹ್ನ ಹಾಗೂ ಸಂಜೆ ಊಟ ಪೂರೈಕೆ
  • ಮೂರೂ ಹೊತ್ತು ತಲಾ 11 ಸಾವಿರ ರೈಸ್ ಬಾತ್ ಹಾಗೂ ಪಲಾವ್ ಪೂರೈಕೆ
  • ರೈಸ್ ಬಾತ್ ಜೊತೆ ಚಟ್ನಿ ಹಾಗೂ ಪಲಾವ್ ಜೊತೆ ಗ್ರೇವಿ ಮತ್ತು ಸೂಕ್ತ ಡಿಶ್
  • ಬೆಂಗಳೂರಿನ 53 ವಾರ್ಡ್’ಗಳಲ್ಲಿ ತಲಾ 200 ಪ್ಯಾಕೆಟ್’ಗಳ ವಿತರಣೆ
  • ಬೆಳಿಗ್ಗೆ 8 ಗಂಟೆ, ಮಧ್ಯಾಹ್ನ 12.30 ಹಾಗೂ ರಾತ್ರಿ 7.30ಕ್ಕೆ ಆಹಾರ ವಿತರಣೆ
  • ಆಯ್ದ ಇಂದಿರಾ ಕ್ಯಾಂಟೀನ್’ಗಳಲ್ಲಿ ವಿತರಣೆ 

 

Related posts