ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿ ಗ್ರಂಭೀರವಾಗಿದೆ. ಆದರೆ ಯಾವುದೇ ಆತಂಕವಿಲ್ಲ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಕುಟುಂಬ ಸದಸ್ಯರು ಹಾಗೂ ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಮುತ್ತಪ್ಪ ರೈ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ.
ಈ ಕುರಿತಂತೆ ಕೆಲ ಅಂತರ್ಜಾಲ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಮಾಹಿತಿ ಹರಿದಾಡಿದೆ. ಈ ಬಗ್ಗೆ ಸ್ಪಷ್ಟ ಪಡಿಸಿರುವ ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಶರಣಪ್ಪ, ಮುತ್ತಪ್ಪ ರೈ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.