ಕಲಬುರಗಿ: ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಜಯ ಪ್ರಧಾನ ವೇದಿಕೆಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿನ ಗಮನ ಸೆಳೆದಿದೆ. ಸಾಹಿತ್ಯ ಸಮ್ಮೇಳನದ ಸಮ್ಮೇಳಾನಾಧ್ಯಕ್ಷರ ಭಾಷಣ ಮಾಡಿದ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಪ್ರತಿಯೊಂದು ಮಗುವೂ ಮಾತೃಭಾಷೆಯಲ್ಲಿ ಕಲಿಯುವುದು ಅಗತ್ಯ. ಆದರೆ ನೀವು ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಹೇರಿದಲ್ಲಿ ಕನ್ನಡೇತರ ಅನ್ಯಭಾಷಿಕರ ಮೂಲಭೂತ ಹಕ್ಕಿಗೆ, ಮಕ್ಕಳು ಅವರವರ ಮಾತೃ ಭಾಷೆಯಲ್ಲಿ ಕಲಿಯುವ ಹಕ್ಕಿಗೆ ಚ್ಯುತಿಯೊದಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಯಾವುದು ಪರಿಸರ ಭಾಷೆಯೋ ಅದರಲ್ಲಿ ಮಾತ್ರ ಮಕ್ಕಳು ಲೋಕಾಕೃತಿಯನ್ನು ಚೆನ್ನಾಗಿ ಗ್ರಹಿಸಬಲ್ಲರು. ಆದ ಕಾರಣ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು ಎಂದು ಡಾ. ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದರು.
ಕರ್ನಾಟಕದಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಢಿಸುವುದೆಂದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರುವುದು ಬಹು ಅಗತ್ಯ ಎಂದವರು ಹೇಳಿದರು. ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದುವ ನಮ್ಮ ಮಕ್ಕಳು ಹೆಚ್ಚು ಜಾಣರಾಗುವರೇ? ಕರ್ನಾಟಕದ ದೊಡ್ಡ ವಿಜ್ಞಾನಿಗಳು, ಉದ್ಯಮಿಗಳು, ಕವಿ, ಸಾಹಿತಿಗಳು, ರಾಜಕೀಯ ಮುತ್ಸದ್ದಿಗಳು, ದೇಶಕ್ಕಾಗಿ ತಮ್ಮ ಬಾಳನ್ನೇ ಧಾರೆಯೆರೆದ ರಾಷ್ಟ್ರ ಪುರುಷರು ಕನ್ನಡ ಭಾಷೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಈಗ ಸಾಧನೆಯ ಉತ್ತುಂಗ ಶಿಖರವೇರಿರುವಂಥವರು ಎಂದು ಎಚ್.ಎಸ್. ವೆಂಕಟೇಶಮೂರ್ತಿ ಉದಾಹರಿಸಿದರು.