ಮಹಿಳೆಯರ ‘ಉಚಿತ ರಥ’ಗಳು ಹೀಗಿವೆ; ‘ಶಕ್ತಿ’ ಯೋಜನೆ ಪರಿಪೂರ್ಣ ಯಶಸ್ಸಿಗೆ KSRTC ಕಾರ್ಯತಂತ್ರ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರೆತಾಗಿದೆ. ರಾಜ್ಯದ ಇತಿಹಾಸದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಗ್ಯಾರೆಂಟಿ’ ಯೋಜನೆ ಜಾರಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರಾಂಡ್‌ ಸ್ಟೆಪ್ಸ್‌ ಮುಂಭಾಗ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ ಮಹತ್ವಾಕಾಂಕ್ಷೆಯ “ಶಕ್ತಿ” ಯೋಜನೆ ಉದ್ಘಾಟಿಸಿದರು.

ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹಿತ ಸಚಿವರನೇಕರು ಉಪಸ್ಥಿತರಿದ್ದರು. ರಾಜಧಾನಿಯಲ್ಲಷ್ಟೇ ಅಲ್ಲ, ವಿವಿಧ ಜಿಲ್ಲಾ ಕೇಂದ್ರಗಳಲ್ಲೂ. ಶಕ್ತಿ ಯೋಜನೆಯನ್ನು ಉದ್ಘಾಟಿಸಲಾಯಿತು.

‘ಶಕ್ತಿ’ ಯೋಜನೆಯ ಪ್ರಮುಖ ಅಂಶಗಳು :

  • ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು. ʼ

  • ಶಕ್ತಿ ಯೋಜನೆʼಯ ಸೌಲಭ್ಯವು ಪ್ರತಿನಿತ್ಯ ರಾಜ್ಯದ 41.81 ಲಕ್ಷ ಮಹಿಳೆಯರಿಗೆ ವರದಾನವಾಗಲಿದೆ.

  • .ರಾಜ್ಯದೊಳಗೆ ಪ್ರಯಾಣಕ್ಕೆ ಮಾತ್ರ ಅನ್ವಯ. ಅಂತರರಾಜ್ಯ ಮಾರ್ಗಗಳಲ್ಲಿ ಕಾರ್ಯಾಚರಿಸುವ  enclave & solitary routes ಸಾರಿಗೆಗಳಲ್ಲೂ ರಾಜ್ಯದೊಳಗೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಇದೆ.

  • ರಾಜ್ಯದ 6308 ನಗರ ಸಾರಿಗೆ, 5958 ಸಾಮಾನ್ಯ ಹಾಗೂ 6343 ವೇಗದೂತ ಬಸ್ಸುಗಳಲ್ಲಿ (ಒಟ್ಟು 18609 ಬಸ್ಸುಗಳಲ್ಲಿ) ಪ್ರಯಾಣಿಸಬಹುದು.

  • ಐಷಾರಾಮಿ ಸಾರಿಗೆಗಳಲ್ಲಿ ಈ ಸೌಲಭ್ಯ ಇರಲ್ಲ.

  • ಇಟಿಎಂ ತ್ರಂತ್ರಾಂಶದಲ್ಲಿ ಉಚಿತ ಟಿಕೆಟ್‌ ವಿತರಣೆಗೆ ಅಗತ್ಯ ಮಾರ್ಪಾಡು ಮಾಡಲಾಗಿದ್ದು, ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ.

  • ಗುರುತಿನ ಚೀಟಿ ಪರಿಶೀಲಿಸಿ ಶೂನ್ಯ ಟಿಕೆಟ್‌ ವಿತರಿಸಲಾಗುವುದು.

  • ಇ.ಟಿ.ಎಂ.ನಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ಪಿಂಕ್‌ ಟಿಕೆಟ್‌ ವಿತರಿಸಲು ಕ್ರಮ.

  • ಮುಂಗಡ ಬುಕಿಂಗ್‌ ಸೌಲಭ್ಯವಿರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಆಸನ ಕಾಯ್ದಿರಿಸಲು ಅವಕಾಶ ಇದೆ. ಯೋಜನೆಯ ವೆಚ್ಚವನ್ನು ಇ.ಟಿ.ಎಂ.ಗಳಿಂದ ವಿತರಿಸಲಾದ ಶೂನ್ಯ ಟಿಕೆಟ್‌/ ಶಕ್ತಿ ಸ್ಮಾರ್ಟ್‌ ಕಾರ್ಡ್‌ ದತ್ತಾಂಶ ಆಧರಿಸಿ ನಿಗಮಗಳಿಗೆ ಭರಿಸಲಾಗುವುದು.

  • ಸೇವಾಸಿಂಧು ತಂತ್ರಾಂಶದ ಮೂಲಕ ಜೂನ್ 15ರಿಂದ ಅರ್ಜಿಗಳನ್ನು ಸಲ್ಲಿಸಬಹುದು.

  • 3 ತಿಂಗಳೊಳಗೆ ‘ಶಕ್ತಿ ಸ್ಮಾರ್ಟ್‌ ಕಾರ್ಡ್‌’ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು.

  • ಶಕ್ತಿ ಸ್ಮಾರ್ಟ್‌ ಕಾರ್ಡ್‌ ವಿತರಿಸುವವರೆಗೆ, ಕೇಂದ್ರ-ರಾಜ್ಯ ಸರ್ಕಾರಗಳು, ಸರ್ಕಾರಿ ಸ್ವಾಮ್ಯದ ಕಚೇರಿಗಳು ವಿತರಿಸಿದ ಭಾವಚಿತ್ರ, ವಿಳಾಸವಿರುವ ಗುರುತಿನ ಚೀಟಿಯನ್ನು ಪರಿಗಣಿಸಲಾಗುವುದು.

  • ಪ್ರಸಕ್ತ ವರ್ಷದಲ್ಲಿ ನಾಲ್ಕೂ ನಿಗಮಗಳು ಸೇರಿ ಒಟ್ಟು 1894 ಹೊಸ ವಾಹನಗಳನ್ನು ಸೇರ್ಪಡೆ ಮಾಡಲು ಯೋಜಿಸಲಾಗಿದೆ.

  • ‘ಶಕ್ತಿ’ ಯೋಜನೆ ಅನುಷ್ಠಾನ ನಂತರ ಸಾರ್ವಜನಿಕ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ಸುಗಳ ಸೇರ್ಪಡೆಗೆ ಕ್ರಮ.

  • ಅಗತ್ಯಕ್ಕೆ ಅನುಸಾರ ಸಿಬ್ಬಂದಿ ನೇಮಕಾತಿಗೆ ಕ್ರಮ

  • ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದಲ್ಲಿ, ಬಸ್ಸುಗಳ ಕೊರತೆ ನೀಗಿಸಲು ಅನುಸೂಚಿಗಳ ವೇಳಾಪಟ್ಟಿ/ಮಾರ್ಗ ಪರಿಷ್ಕರಣೆ ಮಾಡಲಾಗುವುದು. 

Related posts