ಮಹದಾಯಿ ವಿಚಾರ: ಗೋವಾ ವಾದ ಸತ್ಯಕ್ಕೆ ದೂರವಾದುದು: ಜಾರಕಿಹೊಳಿ

 

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತು ಈಗಾಗಲೇ ನ್ಯಾಯಾಧಿಕರಣವು ಐತೀರ್ಪು ನೀಡಿದ್ದು, ಕೇಂದ್ರ ಸರ್ಕಾರವೂ ಸಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಗೋವಾ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಹಸ್ಯಾಸ್ಪದವಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮಹದಾಯಿ ಯೋಜನೆಯ ಅನುಷ್ಠಾನದ ವಿಷಯವು ಈಗಾಗಲೇ ತಾರ್ಕಿಕವಾಗಿ ಅಂತ್ಯವಾಗಿದೆ. ಅರಣ್ಯ ಇಲಾಖೆ ಅನುಮೋದನೆ ಮಾತ್ರ ಬಾಕಿ ಇದ್ದು, ಇಂತಹ ಸಂದರ್ಭದಲ್ಲಿ ನೆರೆಯ ರಾಜ್ಯ ಗೋವಾ ಸುಖಾ ಸುಮ್ಮನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರವು ಇದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿ, ಗೋವಾ ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಛಾಯಾಚಿತ್ರ ಮತ್ತು ವಿಡೀಯೋಗಳು ಅವರೇ ಸೃಷ್ಟಿಸಿರುವ ದಾಖಲೆಗಳಷ್ಟೇ, ಮಹದಾಯಿ ಮತ್ತು ಮಲಪ್ರಭಾ ನದಿ ನಡುವೆ ಪ್ರಬಲ ಗೋಡೆ ನಿರ್ಮಿಸಲಾಗಿದೆ. ಮಹದಾಯಿ ನದಿಯ ಒಂದು ಹನಿ ನೀರೂ ಸಹ ಮಲಪ್ರಭಾ ನದಿ ಸೇರಿಲ್ಲ, ಇಂತಹ ಸುಳ್ಳು ದಾಖಲೆಗಳನ್ನು ಸುಪ್ರೀಂ ಕೋರ್ಟ್ ಸಹ ನಂಬುವುದಿಲ್ಲ ಎಂದು ಹೇಳಿದ ಜಲ ಸಂಪನ್ಮೂಲ ಸಚಿವರು, ಈ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಯೊಂದು ಅಸ್ತಿತ್ವದಲ್ಲಿ ಇದ್ದು, ಈ ಸಮಿತಿಯಿಂದ ವಾಸ್ತವ ಸ್ಥಿತಿಯ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಅಕ್ರಮವಾಗಿ ಮಹದಾಯಿ ಹರಿವನ್ನು ತಿರುಗಿಸಿದ್ದೇವೆ ಎಂಬ ಗೋವಾ ರಾಜ್ಯದ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಸಚಿವರು, ಮಹದಾಯಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆ ಜಾರಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ ಮಹದಾಯಿ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಪುನರುಚ್ಛರಿಸಿದ್ದಾರೆ.

ಮಹದಾಯಿ ‌ಮತ್ತು ಕೃಷ್ಣಾ ನದಿ ನೀರು ಹಂಚಿಕೆ‌ ವಿಚಾರದಲ್ಲಿ ನೆರೆ ರಾಜ್ಯಗಳು ವಿವಾದ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರೂ ಸಹಾ ಕೇಂದ್ರ ಜಲಶಕ್ತಿ ಸಚಿವರಿಗೆ ತುರ್ತು ಪತ್ರ ಬರೆದಿದ್ದು ಕೂಡಲೇ ರಾಜ್ಯದ ಪಾಲಿನ‌‌ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Related posts