ಖಾಸಗಿ ಬಸ್ ಅಪಘಾತದ ಪ್ರತಿಧ್ವನಿ; ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ

ಮಂಗಳೂರು: ಕರಾವಳಿಯಲ್ಲಿ ಕಿಲ್ಲರ್ ಬಸ್‌ಗಳ ವಿರುದ್ದ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಗುರುವಾರ ಬಸ್ ಡಿಕ್ಕಿಯಾಗಿ ಪೊಳಲಿ ಸಮೀಪದ ಯುವಕ ಸಾವನ್ನಪ್ಪಿದ ನಂತರ ಇದೀಗ ಸಾರ್ವಜನಿಕರ ಆಕ್ರೋಶ ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿದೆ.

ಗುರುಪುರ ಜಂಕ್ಷನ್ ಬಳಿ ಗುರುವಾರ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಪೊಳಲಿ ಸಮೀಪದ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಮೃತಪಟ್ಟಿದ್ದಾರೆ. ಈ ಅಪಘಾತದಿಂದ ಸಿಟ್ಟಿಗೆದ್ದ ಜನರು ಇಂದು ವಿವಿಧ ಸಂಘಟನೆಗಳ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು.

ಗುರುಪುರ-ಕೈಕಂಬ ಬಳಿ ಜಮಾಯಿಸಿದ ಸಾವಿರಾರು ಮಂದಿ ಪ್ರತಿಭಟನಾಕಾರರು ಖಾಸಗಿ ಬಸ್‌ಗಳ ನಿರ್ಲಕ್ಷ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೈಕಂಬ ಜಂಕ್ಷನ್ ನಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಮಳೆಯ ನಡುವೆಯೂ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಕೆಲಹೊತ್ತು ವಾಹನ ಸಂಚಾರ ಏರುಪೇರಾಯಿತು. ಸಾರ್ವಜನಿಕರ‌ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಬಜಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಖಾಸಗಿ ಬಸ್ಸುಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಚಾಲಕರ ನಿರ್ಲಕ್ಷ್ಯದಿಂದಾಗಿ ಅಪಘಾತ ಮರುಕಳಿಸಿದ್ದು ಈ ಸಂಬಂಧ ಆರ್ಟಿಒ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಸ್ ಶ್ರಮಿಕರ ವಿಷಾದ..

ಇನ್ನೊಂದೆಡೆ, ಸಾವಿಗೆ ಕಾರಣವಾದ ಅಪಘಾತದ ಹಿನ್ನೆಲೆಯಲ್ಲಿ ಇಡೀ ಖಾಸಗಿ ಬಸ್ ವಲಯವನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸುವುದು ಸರಿಯಲ್ಲ ಎಂದು ಬಸ್ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ನಮ್ಮವರೇ ಆಗಿದ್ದಾರೆ. ಈ ಬಗ್ಗೆ ನಮಗೆಲ್ಲರಿಗೂ ನೋವು ಇದೆ‌ ಎಂದಿರುವ ಬಸ್ ಶ್ರಮಿಕರು, ನಿರ್ಲಕ್ಷ್ಯ ತಾಳಿದ್ದರೆ ಅದು ಒಬ್ಬಿಬ್ಬರಷ್ಟೇ, ಹಾಗಾಗಿ ಎಲ್ಲಾ ಬಸ್ಸುಗಳ ಸಂಚಾರ ತಡೆಯುವುದು ಸರಿಯಲ್ಲ ಎಂದು ಈ ಸಿಬ್ಬಂದಿ ಹೇಳಿದ್ದಾರೆ.

Related posts