ಕೊರೋನಾ ಸೋಂಕಿತ ತಾಯಿ ಗುಣಮುಖರಾಗಿ ಮರಳಿದಾಗ; ಅಮ್ಮ-ಮಗಳ ಸಕತ್ ಡಾನ್ಸ್ ನೋಡಿದ್ರೆ ನೀವೂ ಖುಷಿ ಪಡ್ತೀರಿ..

ಕೊರೋನಾ ಅಂದರೆ ಇದೀಗ ಆತಂಕದ ವಿಚಾರ. ಅಗೋಚರ ವೈರಾಣು ವಕ್ಕರಿಸಿದರೆ ಸಾಕು ಗೆದ್ದು ಬರುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇರಲ್ಲ. ಯಾಕೆಂದರೆ ಜಗತ್ತಿನ 200 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ವೈರಾಣು ಮಾರಣ ಹೋಮವನೆ ನಡೆಸಿದೆ. ಇಂತಹಾ ವೈರಾಣು ಸೋಂಕಿಗೆ ಒಳಗಾಗಿ ಬದುಕಿ ಬಂದಾಗ ಖುಷಿ ಹೇಗಿರುತ್ತೆ? ನಿಜಕ್ಕೂ ಅದು ಪುನರ್ಜನ್ಮ. ಪರಿಸ್ಥಿತಿ ಹೀಗಿರುವಾಗ ಹಲವು ದಿನಗಳ ಕಾಲ ವೈರಾಣು ವಿರುದ್ಧ ಹೋರಾಡಿ ತಾಯಿ ಗೆದ್ದು ಬಂದಾಗ ಮಕ್ಕಳು ಸಂಭ್ರಮಾಚರಣೆ ಮಾಡಿದ ಸನ್ನಿವೇಶವೊಂದು ಇಡೀ ದೇಶದ ಗಮನಸೆಳೆದಿದೆ.


ಮಾಡದ ತಪ್ಪಿಗೆ ಸೋಂಕಿನ ಸ್ಪರ್ಶವಾದ ಕಾರಣಕ್ಕಾಗಿ ಏಕಾಏಕಿ ಆಸ್ಪತ್ರೆಪಾಲಾದ ಮಹಿಳೆ ತನ್ನ ಕುಟುಂಬ ಸದಸ್ಯರಿಂದ ದೂರ ಉಳಿಯಬೇಕಾಗಿತ್ತು. ಹಲವು ದಿನಗಳ ಕಾಲ ಆಕೆಯ ಮನೆಯವರು ಆತಂಕದಲ್ಲೇ ಇದ್ದರು. ಮಗಳಂತೂ ನಿತ್ಯವೂ ಅಮ್ಮನನ್ನು ಕಾಣಲಾಗದೆ ಆಕ್ರಂದನ ತೋಡಿಕೊಳ್ಳುತ್ತಿದ್ದಳು. ಮುಂಬೈನ ಬಡಾವಣೆಯೊಂದರಲ್ಲಿ ವಾಸವಾಗಿರುವ ತುಳು ಭಾಷಿಗ ಕುಟುಂಬದ ಈ ಮಹಿಳೆ ಗುಣಮುಖಳಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ಆಕೆಯ ಕುಟುಂಬದಲ್ಲಿ ಎಂದಿಲ್ಲದ ಸಂತಸ. ಮಗಳ ಪಾಲಿಗಂತೂ ಹರ್ಷವೂ ಹರ್ಷ. ಹಾದಿಯುದ್ದಕ್ಕೂ ನೃತ್ಯ ಮಾಡುತ್ತಲೇ ಸಂಭ್ರಮಿಸಿದ ಕ್ಷಣಗಳನ್ನು ಕೆಲವರು ಮೊಬೈಲ್’ನಲ್ಲಿ ಸೆರೆಹಿಡಿದು ಸಾಮಾಜಿಕಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊ ವೀಕ್ಷಕರನ್ನೂ ಖುಷಿಪಡಿಸಿದ್ದು, ಹಲವರು ಸಂತಸ ಹಂಚಿಕೊಂಡಿದ್ದಾರೆ.

 

Related posts