ಕಾಂಗ್ರೆಸ್-ಜೆಡಿಎಸ್ ವಿಲೀನ ; ಹೆಚ್ಡಿಕೆ ಮುಂದೆ ಚಾಣಾಕ್ಷ ಸೂತ್ರ

ಬೆಂಗಳೂರು: ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅಚ್ಚರಿಯ ಸಲಹೆಯನ್ನು ನೀಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ತಾವು ಕಾಂಗ್ರೆಸ್ ಜೊತೆ ವಿಲೀನವಾಗಿ ಅಥವಾ ಕಾಂಗ್ರೆಸ್ ಜೊತೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿ ಎಂದು ಸಲಹೆ ಮಾಡಿದ್ದಾರೆ.

ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ನಿರಂತರ ಗೆಲುವು, ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ದಿಗ್ವಿಜಯದ ಹಿಂದೆ ಈ ರಾಜಕೀಯ ಚತುರ ಚಾಣಾಕ್ಷ ಪ್ರಶಾಂತ್ ಕಿಶೋರ್ ಸೂತ್ರ ಅಡಗಿದೆ. ಈ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಗೆಲ್ಲಲು ಪ್ರಶಾಂತ್ ಕಿಶೋರ್ ಹಾಕಿಕೊಟ್ಟ ತಂತ್ರಗಾರಿಕೆಯೇ ಕಾರಣ ಎಂಬುದನ್ನು ಮನಗಂಡಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ, ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಲು ಸಲಹೆ ಕೇಳಿದ್ದಾರೆ. ಆದರೆ ಹೆಚ್ಡಿಕೆಗೆ ಚಾಣಾಕ್ಷ ಪ್ರಶಾಂತ್ ಕಿಶೋರ್ ಕಡೆಯಿಂದ ಸಿಕ್ಕಿರೋದು ಅಚ್ಚರಿ ಹಾಗೂ ಕುತೂಹಲಕಾರಿ ಸಲಹೆ.

ಜೆಡಿಎಸ್ ಪುನಶ್ಚೇತನಕ್ಕೆ ಸೂತ್ರ ಹೇಳುವಂತೆ ಪ್ರಶಾಂತ್ ಕಿಶೋರ್‌ ಬಳಿ ತೆರಳಿದ್ದ ಹೆಚ್.ಡಿ.ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ ನಡೆಸಿದರು. ಕರ್ನಾಟಕದ ರಾಜಕೀಯ ಸ್ಥಿತಿಗತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಭವಿಷ್ಯ ಇರಲಾರದು. ಬಿಜೆಪಿಯ ಪ್ರಾಬಲ್ಯವು ಜೆಡಿಎಸ್’ಗೆ ಅಡ್ಡಿಯಾಗಬಹುದು ಎಂದರು. ಈಗಾಗಲೇ ಜೆಡಿಎಸ್’ನ ಹಲವಾರು ಶಾಸಕರು ಬಿಜೆಪಿಯ ಬಾಗಿಲ ಮುಂದೆ ನಿಂತಿದ್ದಾರೆ. ಪ್ರಸ್ತುತ ಇರುವ 34 ಜೆಡಿಎಸ್ ಶಾಸಕರ ಪೈಕಿ 10-12 ಶಾಸಕರು ದೇವೇಗೌಡರ ನಂಬಿಕಸ್ತರು. ಹೀಗಿರುವಾಗ ಮುಂದಿನ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಅವರು ಹೆಚ್ಡಿಕೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆನ್ನಲಾಗಿದೆ.

ಈ ಹಿಂದೆ ಎರಡೂ ರಾಷ್ಟ್ರೀಯ ಪಕ್ಷಗಳೊಂದಿಗೆ ಸೇರಿಕೊಂಡು ಸರ್ಕಾರ ರಚಿಸಿದಾಗಲೂ ಜೆಡಿಎಸ್ ಪಕ್ಷಕ್ಕೆ ಹೊಡೆತಗಳೇ ಬಿದ್ದಿವೆ. ಇನ್ನು ಮುಂದೆ ಸ್ವಂತ ಬಲದಲ್ಲಿ ನಿಲ್ಲುವ ವೇಳೆಗಾಗಲೇ ಮತ್ತಷ್ಟು ಶಾಸಕರು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಸೇರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಹೀಗಿರುವಾಗ ತಮ್ಮ ಪಕ್ಷವು ಕಾಂಗ್ರೆಸ್ ಜೊತೆ ವಿಲೀನವಾಗುವುದು ಒಳಿತು ಎಂದು ಪ್ರಶಾಂತ್ ಕಿಶೋರ್ ಸಲಹೆ ಮುಂದಿಟ್ಟಿದ್ದಾರೆನ್ನಲಾಗಿದೆ.

Related posts