ಮಂಗಳೂರು: ಕೊರೋನಾ ವೈರಸ್ ನಮ್ಮ ದೇಶದಲ್ಲೂ ಮರಣ ಮೃದಂಗ ಭಾರಿಸುತ್ತಿದೆ. ಕೊರೋನಾ ತನ್ನ ಕಬಂದ ಬಾಹುಗಳನ್ನು ಚಾಚುತ್ತಲೇ ಇದ್ದು ಡೈನ್ ಡೈನ್ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೊರೋನಾ ತಲ್ಲಣದ ಕಾರಣದಿಂದಾಗಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡದಲ್ಲಂತೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದಷ್ಟೇ ಅಲ್ಲ, ಜಾತ್ರೆ ಉತ್ಸವಗಳಿಗೂ ಕಠಿಣ ನಿಯಮ ಅನುಸರಿಸಲಾಗುತ್ತಿದೆ.
ಈ ನಡುವೆ ಕೊರೋನಾ ವ್ಯಾಪಿಸುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಗಳ ಸಾರ್ವಜನಿಕ ಸೇವೆಗಳನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಸಿಂದೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಕಚೇರಿಗಳಲ್ಲಿ ಸೇವೆ ನಿರ್ಬಂಧಿಸಲಾಗಿದೆ. ಕಂದಾಯ ಇಲಾಖೆ, ಆರ್ಟಿಒ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾರ್ಚ್ 31ರ ವರೆಗೆ ಸೇವೆ ಸಿಗಲ್ಲ. ಸರ್ಕಾರಿ ಕಚೇರಿಗಳಲ್ಲಿ ಜನಸಂದಣಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಆಧಾರ್ ತಿದ್ದುಪಡಿ, ಹೊಸ ವಾಹನಗಳ ನೋಂದಣಿ, ಹೊಸ ಡ್ರೈವಿಂಗ್ ಲೈಸನ್ಸ್ , ಆಸ್ತಿ ನೋಂದಣಿ ಇತ್ಯಾದಿ ಸೇವೆಗಳು ಮಾರ್ಚ್ 31 ರ ತನಕ ಲಭ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.