ಕೊರೋನಾ ಆತಂಕ; ರಸ್ತೆ ಅಗೆದು ಗ್ರಾಮಗಳಿಗೇ ದಿಗ್ಬಂಧನ

ಬೆಂಗಳೂರು: ಸರಣಿ ಸಾವಿಗೆ ಕಾರಣವಾಗುತ್ತಿರುವ ಕಿಲ್ಲರ್ ಕೊರೋನಾ ವೈರಸ್ ಹಳ್ಳಿಗಳಲ್ಲಿ ಕೂಡಾ ಆತಂಕ ಸೃಷ್ಟಿಸಿದೆ. ಹಾಗಾಗಿ ಹೊರಗಿನವರು ತಮ್ಮೂರಿಗೆ ಬರಬಾರದೆಂದು ರಸ್ತೆಗಳನ್ನೇ ಬಂದ್ ಮಾಡುತ್ತಿರುವ ಸನ್ನಿವೇಶ ಹಲವು ಗ್ರಾಮಗಳಲ್ಲಿ ಕಂಡುಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿನಿಧಿಸುತ್ತಿರುವ ಶಿಕಾರಿಪುರದಲ್ಲೇ ಈ ರೀತಿರಾ ಪ್ರಸಂಗ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮ ಸಮೀಪದ ಬೆಂಡೆ ಕಟ್ಟೆ ದೊಡ್ಡ ತಾಂಡ ಬಳಿ ರಸ್ತೆಗಳನ್ನು ಅಗೆದು ಬಂದ್ ಮಾಡಲಾಗಿದೆ. ಊರಿನ ಪ್ರಮುಖರು, ಯುವಕರು ಹಾಗೂ ಗ್ರಾಮಸ್ಥರೊಂದಿಗೆ ಜೊತೆಗೂಡಿ ಹೊರಗಡೆಯಿಂದ ಊರ ಒಳಗಡೆ ಬರದಂತೆ ಎಲ್ಲಾ ದಾರಿಯನ್ನು ಮುಚ್ಚಲಾಗಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ, ಧರ್ಮಪುರ ರಸ್ತೆಯಲ್ಲಿರುವ ದೇವರಕೊಟ್ಟ ಗ್ರಾಮಸ್ಥರೂ ಕೊರೊನಾ ಭೀತಿಯಿಂದ, ತಮ್ಮೂರಿಗೆ ಬರುವ ಎಲ್ಲಾ ರಸ್ತೆಯನ್ನು ಬಂದ್ ಮಾಡಿದ್ದಾರೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿರುವ ಗ್ರಾಮಸ್ಥರು, ನಮ್ಮ ಊರಿಗೆ ಬರಬೇಡಿ. ಕೊರೋನಾ ಹರಡಬೇಡಿ ಎಂಬ ಸೂಚನೆ ರವಾನಿಸಿದ್ದಾರೆ.

ಚಿತ್ರದುರ್ಗ ತಾಲೂಕು ಆಯಿತೋಳು ಗ್ರಾಮ ಸಂಪರ್ಕಿಸುವ ಎಲ್ಲಾ ಮುಖ್ಯ ರಸ್ತೆಗಳಿಗೂ ಗ್ರಾಮಸ್ಥರು ಬೇಲಿ ಹಾಕುವ ಮೂಲಕ ಗ್ರಾಮದೊಳಕ್ಕೆ ಯಾರೂ ಬಾರದಂತೆ ತಡೆಯಲು ಮುಂದಾಗಿದ್ದಾರೆ. ಜೆಸಿಬಿ ಮೂಲಕ ಅಗೆದು ರಸ್ತೆಯನ್ನು ಅಗೆದು ವಾಹನಗಳು ತಮ್ಮೂರು ಪ್ರವೇಶಿಸದಂತೆ ಮಾಡಿದ್ದಾರೆ.

ಕೊರೋನಾ ಭೀತಿಯಿಂದಾಗಿ ಜನರು ಹಳ್ಳಿಯತ್ತ ಮುಖ ಮಾಡುತ್ತಿರುವುದರಿಂದ ಅವರ ಮೂಲಕ ಸೋಂಕು ಹರಡಬಹುದು ಎಂಬ ಆತಂಕ ಈ ಊರಿನ ಜನರದ್ದು. ಹಾಗಾಗಿ ನಗರದಿಂದ ಯಾರೂ ತಮ್ಮ ಹಳ್ಳಿಗೆ ಬರಬಾರದು ಎಂಬ ಉದ್ದೇಶದಿಂದ ಈ ರೀತಿ ರಸ್ತೆ ಬಂದ್ ಮಾಡುತ್ತಿರುವುದು ಸಾಮಾನ್ಯವಾಗಿದೆ.

Related posts