ದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಾಣು ನಿಯಂತ್ರಣ ಸಂಬಂಧ ಲಾಕ್ ಡೌನ್’ಗೆ ಆದೇಶಿಸಿರುವ ಮೋದಿ ಸರ್ಕಾರ, ಇದರಿಂದಾಗಬಹುದಾದ ಅನಾಹುತದಿಂದ ಜನರನ್ನು ಪಾರು ಮಾಡಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಲಾಕ್‌ಡೌನ್ ನಿಂದಾಗಿ ದೇಶಕ್ಕೆ 9 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರೇ ಸಾಕಷ್ಟು ನಷ್ಟ ಅನುಭವಿಸಲಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ತುರ್ತು ನಿರ್ಧಾರವೊಂದನ್ನು ಕೈಗೊಂಡಿರುವ ಮೋದಿ ಸರ್ಕಾರ, ದೇಶದ ಇತಿಹಾಸದಲ್ಲೇ ಮೊದಲೆಂಬಂತೆ ಇಂದು 1.7 ಲಕ್ಷ ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.
ಲಾಕ್‌ಡೌನ್ ಕ್ರಮದಿಂದಾಗಿ ನಷ್ಟ ಅನುಭವಿಸುವ ಮಧ್ಯಮ ಮತ್ತು ಕೆಲ ವರ್ಗದ ಜನರ ಜನರ ನೆರವಿಗೆ ಧಾವಿಸುವ ಉದ್ದೇಶದಿಂದ ಈ ಪರಿಹಾರ ಘೋಷಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮುಂದಿನ ಮೂರು ತಿಂಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ ನೆರವಿನ ಪ್ಯಾಕೇಜ್’ಗಳ ಹೈಲೈಟ್ ಇಲ್ಲಿದೆ
- ಮುಂದಿನ ಮೂರು ತಿಂಗಳು ಬಿಪಿಎಲ್ ಕಾರ್ಡುದಾರರಿಗೆ 5 ಕೆಜಿ ಉಚಿತ ಅಕ್ಕಿ ಮತ್ತು ಗೋದಿ ವಿತರಣೆ
- ಉಜ್ವಲ ಯೋಜನೆಯ ಅಡಿಯಲ್ಲಿ 3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಉಚಿತವಾಗಿ ಅಡಿಗೆ ಅನಿಲ ವಿತರಣೆ.
- ಕಿಸಾನ್ ಸಮ್ಮಾನ್ ಯೋಜನೆಯಡಿ 9 ಕೋಟಿ ರೈತರ ಖಾತೆಗಳಿಗೆ ಮೂರು ತಿಂಗಳಿಗೆ ತಲಾ 2,000 ಹಣ ಜಮಾವಣೆ. ಮೊದಲ ಕಂತಿನ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪಾವತಿ
- ಜನ್‌ಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗಳಿಗೂ ನೇರವಾಗಿ 500 ರೂ ಜಮೆ
- ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ಶ್ಯೂರಿಟಿ ಇಲ್ಲದೆ ಸಾಲ
- ದಿನಗೂಲಿ ನೌಕರರ ಕೂಲಿ 180 ರಿಂದ 200 ರೂಪಾಯಿಗೆ ಏರಿಕೆ
- ಎಲ್ಲಾ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ನಿಧಿಯಲ್ಲಿರುವ 31,000 ಕೋಟಿ ಹಣ ಆಯಾ ರಾಜ್ಯಗಳು ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಬೇಕು ಎಂದು ಸೂಚನೆ
- ಸಂಘಟಿತ ವಲಯದ ಕಾರ್ಮಿಕರಿಗೆ ದೀನ ದಯಾಳ ಉಪಾಧ್ಯಾಯ ಯೋಜನೆಯ ಅಡಿಯಲ್ಲಿ ತಲಾ 20 ಲಕ್ಷ ರೂ. ಸಾಲ. ಇದರಿಂದ ಸುಮಾರು 2 ಕೋಟಿ ಕುಟುಂಬಗಳಿಗೆ ಲಾಭ.
- ಕಾರ್ಮಿಕರ ಪಿಎಫ್ ಹಣವನ್ನು ಹಿಂಪಡೆಯಲು ನಿಯಮ ಸಡಿಲು
- ಶೇ.75ರಷ್ಟು ಪಿಎಫ್ ಹಣವನ್ನು ಪಡೆಯಲು ಅವಕಾಶ
- 15,000 ಕ್ಕಿಂತ ಕಡಿಮೆ ವೇತನ ಹೊಂದಿರುವವರಿಗೆ ಶೇ.24 ರಷ್ಟು ಪಿಎಫ್ ಹಣ ಸರ್ಕಾರದಿಂದಲೇ ಪಾವತಿ
- ಕಂಪೆನಿ ಮತ್ತು ಉದ್ಯೋಗಿ ಎರಡೂ ಪಾಲನ್ನೂ ಸರ್ಕಾರವೇ ನೀಡಲಿದೆ.
- ವೃದ್ದಾಪ್ಯ, ವಿಧವಾ ಮತ್ತು ಅಂಗವಿಕಲರಿಗೆ 2000 ಹೆಚ್ಚುವರಿ ಪಿಂಚಣಿ ನಿಗದಿ. ಹಣ ನೇರವಾಗಿ ಅವರ ಖಾತೆಗೆ ವರ್ಗಾವಣೆ