ಅಕಾಲಿಕ ಮಳೆಗೆ ಬೆಳೆ ನಾಶ; ರೈತರ ನೆರವಿಗೆ ಧಾವಿಸಿದ ಸಚಿವ

ಒಂದೆಡೆ ಕೊರೋನಾ ಆಘಾತ.. ಇನ್ನೊಂದೆಡೆ ಅಕಾಲಿಕ ಮಳೆಯ ಹೊಡೆತ.. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ಅನ್ನದಾತರು ನಲುಗಿದ್ದಾರೆ.

ಕೊಪ್ಪಳ: ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಮೊದಲೇ ಕೊರೋನಾ ಕಾರಣದಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಅನ್ನದಾತರಿಗೆ, ಈ ಮಳೆಯಿಂದಾಗಿ ಮತ್ತೆ ದಿಕ್ಕುತೋಚದ ಸ್ಥಿತಿ ಎದುರಿಸುವಂತಾಗಿದೆ.
ಮಳೆಯಿಂದ ಬೆಳೆ ನಾಶವಾಗಿರುವ ಬಗ್ಗೆ ಮಾಹಿತಿ ತಿಳಿದ ಕೃಷಿ ಸಚಿವ ಬಿ‌.ಸಿ.ಪಾಟೀಲ್ ಕೊಪ್ಪಳ ಜಿಲ್ಲೆಯ ವಿವಿಧೆಡೆ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಸಂಸದ ಕರಡಿ‌ ಸಂಗಣ್ಣ, ಶಾಸಕರಾದ ದಡೆಸೂಗೂರು ಬಸವರಾಜ್, ಪರಣ್ಣ ಮುನವಳ್ಳಿ, ಜಿ‌ಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹಾಗೂ ಕೃಷಿ ತೋಟಗಾರಿಕಾ ಅಧಿಕಾರಿಗಳು ಈ ವೇಳೆ ಸಚಿವರ ಜೊತೆಗಿದ್ದು ಮಾಹಿತಿ ವಿನಿಮಯ ಮಾಡಿದರು.


ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಹಣವಾಳ, ಸಿಂಗನಾಳ, ಸಿಂಗನಾಳ ಕ್ಯಾಂಪ್, ಜಿರಾಳ ಕಲ್ಲಗುಡಿ ಮೊದಲಾದೆಡೆ ಹೊಲಗಳಿಗೆ ತೆರಳಿ ಪರಿಶೀಲಿಸಿದ ಸಚಿವರು, ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು.

ಬೆಳೆ ನಷ್ಟದ ಬಗ್ಗೆ ಅಂದಾಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಬಿ.ಸಿ.ಪಾಟೀಲ್, ಸರ್ಕಾರ ರೈತರ ಜೊತೆ ಇದೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು..

ಈ ಮಧ್ಯೆ, ಮೆಟ್ರಿ ಗ್ರಾಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಯಾವುದೇ ಆತಂಕವಿಲ್ಲದೇ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಎಂದು ರೈತರಿಗೆ ಸಲಹೆ ಮಾಡಿದರು.

Related posts