ಮಂಗಳೂರು: ಕೊರೋನಾ ವೈರಾಣು ಹಾವಳಿಯಿಂದ ನಲುಗಿರುವ ದೇಶದ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವಾಗಿ ರಾಷ್ಟ್ರವ್ಯಾಪಿ ದೀಪೋತ್ಸವ ಆಚರಿಸಲಾಯಿತು. ಮೋದಿ ಕರೆ ಗೌರವಿಸಿ ಎಲ್ಲೆಲ್ಲೂ ಜ್ಯೋತಿ ಬೆಳಗಿಸಲಾಯಿತು. ಪುಣ್ಯ ಕ್ಷೇತ್ರಗಳಲ್ಲಿ, ಮಂದಿರಗಳಲ್ಲೂ ಹಣತೆ ಬೆಳಗಿಸಿ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ದೀಪಾರಾಧನೆ ವಿಶಿಷ್ಟತೆಯಿಂದ ಗಮನಸೆಳೆಯಿತು.
ದಕ್ಷಿಣಕನ್ನಡ ಜಿಲ್ಲೆಯ ಪೊಳಲಿ ಕ್ಷೇತ್ರದಲ್ಲೀಗ ಜಾತ್ರಾ ವೈಭವದ ಕಾಲ. ಒಂದು ತಿಂಗಳ ಕಾಲ ನಡೆಯುವ, ಪೊಳಲಿ ಚೆಂಡು ಎಂದೇ ಪ್ರತೀತಿಯಲ್ಲಿರುವ ಈ ಜಾತ್ರೆ ಮಾರ್ಚ್ 14 ರಿಂದ ಆರಂಭವಾಗಿದ್ದು ಈ ತಿಂಗಳ 12ರ ವರೆಗೆ ನಡೆಯಬೇಕಿತ್ತು. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಅರ್ಚಕ ವೃಂದ ಹಾಗೂ ಸಿಬ್ಬಂದಿಯಷ್ಟೇ ಪಾಲ್ಗೊಂಡು ಸಾಂಕೇತಿಕವಾಗಿ ಸಂಪ್ರದಾಯವನ್ನಷ್ಟೇ ಅನುಸರಿಸಲಾಗುತ್ತಿದೆ.
ಈ ನಡುವೆ ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ಕರೆ ಹಿನ್ನೆಲೆಯಲ್ಲಿ ಪೊಳಲಿ ಕ್ಷೇತ್ರದಲ್ಲಿ ದೀಪಾರಾಧನೆ ಗಮನಸೆಳೆಯಿತು. ಪುನರ್ನಿಮಾಣಗೊಂಡಿರುವ ಈ ದೇಗುಲ ಬೆಳಕಿನ ಚಿತ್ತಾರದೊಂದಿಗೆ ಸ್ವರ್ಣ ದೇಗುಲದಂತೆ ಕಂಡುಬರುತ್ತಿತ್ತು.
ಧರ್ಮಸ್ಥಳ, ಇಸ್ಕಾನ್ ದೇಗುಲಗಳಲ್ಲಿ ದೀಪ
ಧರ್ಮಸ್ಥಳ ಸೇರಿದಂತೆ ಕರಾವಳಿಯ ದೇಗುಲಗಳಲ್ಲಿ ದೀಪ ಬೆಳಗಿಸಿ ನಾಡಿನ ಒಳಿತನ್ನು ಆಶಿಸಲಾಯಿತು. ಬೆಂಗಳೂರಿನ ಪ್ರಸಿದ್ಧ ದೇಗುಲಗಳಲ್ಲೊಂದಾಗಿರುವ ಇಸ್ಕಾನ್ ದೇವಾಲಯದ ನೋಟ ನಾಡಿನ ಗಮನ ಸೆಳೆಯಿತು.
ಪ್ರಧಾನಿಯೊಬ್ಬರು ಸಾಮಾಜಿಕ ವ್ಯವಸ್ಥೆಯಲ್ಲಿ ಕೈಂಕರ್ಯದ ಸೂತ್ರವನ್ನು ಪಾಲಿಸಲು ಕರೆ ಕೊಟ್ಟ ಇತಿಹಾಸ ಅಪೂರ್ವ. ಈ ಕರೆಯನ್ನು ಬಹಳಷ್ಟು ಮಂದಿ ಆರಾಧನೆಯ ರೂಪದಲ್ಲಿ ಅನುಸರಿಸಿದರು.. ದೇಶಭಕ್ತಿಯ ಪ್ರತೀಕವಾಗಿ ಕಂಡವರೂ ಹಲವಾರು.. ಹಾಗಾಗಿ ಎಲ್ಲೆಲ್ಲೂ ದಿಗ್ವಿಜಯದ ಜ್ಯೋತಿ ಪ್ರಜ್ವಲಿಸುತ್ತಲಿತ್ತು.