ಕಾಸರಗೋಡು-ಮಂಗಳೂರು ಹೆದ್ದಾರಿ ಬಂದ್ ತೆರವಿಗೆ ಹೈಕೋರ್ಟ್ ಆದೇಶ

ಕಾಸರಗೋಡು: ಕೊರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಮಂಗಳೂರು-ಕಾಸರಗೋಡು ಗಡಿ ಭಾಗದಲ್ಲಿ ಮುಚ್ಚಲಾಗಿರುವ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.

ಕೇರಳಕ್ಕೆ ಹೊಂದಿಕೊಂಡಿರುವ ಕಾಸರಗೋಡಿನಲ್ಲಿ ಹಲವಾರು ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನು ಬಂದ್ ಮಾಡಿ ದಕ್ಷಿಣಕನ್ನಡ ಜಿಲ್ಲಾಡಳಿತ ಆದೇಶಿಸಿತ್ತು. ಇದರಿಂದಾಗಿ ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಅಸೋಸಿಯೇಷನ್ ವತಿಯಿಂದ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಭಾರತದ ಪ್ರಜೆ ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮುಕ್ತವಾಗಿ ಸಂಚರಿಸಬಹುದು ಎಂದು ಸಂವಿಧಾನದಲ್ಲಿ ಅವಕಾಶವಿದೆ. ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿತು.

ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಗಳನ್ನು ದಿಗ್ಬಂಧನದಿಂದ ಮುಕ್ತವಾಗಿರಿಸುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕರ್ನಾಟಕವು ನಿರ್ಮಿಸಿರುವ ಗಡಿ ಪ್ರವೇಶ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಬೇಕು ಹಾಗೂ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯುವ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಸೂಚಿಸಿತು .

Related posts