ಸಂಕಷ್ಟದಲ್ಲಿರುವ ಸಮುದಾಯಕ್ಕೆ ಬಿ.ಎಸ್.ವೈ ಸರ್ಕಾರದಿಂದ 1610 ಕೋ.ರೂ. ವಿಶೇಷ ಪ್ಯಾಕೇಜ್‌

ಬೆಂಗಳೂರು: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಲಾಕ್’ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ಶ್ರಮಿಕ ವರ್ಗ ತೀವ್ರ ಸಂಕಷ್ಟದಲ್ಲಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಅಗಸರು, ಕ್ಷೌರಿಕರು ಆಟೋ-ಟ್ಯಾಕ್ಸಿ ಚಾಲಕರು, ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಶ್ರಮಿಕರಿಗಾಗಿ ಬಿ.ಎಸ್.ವೈ ಸರ್ಕಾರ 1610 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್‌ ಘೋಷಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಪ್ಯಾಕೇಜ್ ಬಗ್ಗೆ ವಿವರ ಒದಗಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಮಾರು 60 ಸಾವಿರ ಅಗಸರು ಹಾಗೂ 2 ಲಕ್ಷದ 30 ಸಾವಿರ ಕ್ಷೌರಿಕ ಸಮುದಾಯದವರಿಗೆ ಹಾಗೂ ೭ ಲಕ್ಷದ 75 ಸಾವಿರ ಆಟೋ-ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಹಣಕಾಸಿನ ನೆರವು ನೀಡಲಾಗುವುದು ಎಂದು ತಿಳಿಸಿದರು. ತರಕಾರಿ ಹಾಗೂ ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದು ಅವರಿಗೂ ನೆರವು ನೀಡಲಾಗುವುದು ಎಂದ ಬಿ.ಎಸ್.ವೈ, ನೇಕಾರ ಸಮ್ಮಾನ್ ಯೋಜನೆಯಡಿ 54 ಸಾವಿರ ನೇಕಾರರಿಗೆ ವರ್ಷಕ್ಕೆ 2 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.

ಲಾಕ್ ಡೌನ್ ನಿಂದಾಗಿ ಹೂವುಗಳಿಗೆ ಬೇಡಿಕೆಯಿಲ್ಲದೆ ಅದನ್ನೇ ನಂಬಿರುವವರು ಕಷ್ಟದಲ್ಲಿದ್ದಾರೆ. ಹಾಗಾಗಿ ಹೂ ಬೆಳೆಗಾರರಿಗೂ ಹೆಕ್ಟೇರ್ ಗೆ ಗರಿಷ್ಠ 25,000 ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

ಅತಿಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜ್‌ ಅನ್ನು ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

Related posts