ಜನರನ್ನು ರಂಜಿಸುವ ಕಲಾವಿದರ ಬದುಕು ಈಗ ಸಂಕಷ್ಟದಲ್ಲಿದೆ. ಆದರೆ ಅವರ್ಯಾರೂ ತಮ್ಮ ಅಸಹಾಯಕ ಪರಿಸ್ಥಿತಿಯನ್ನು ಹೇಳಿಕೊಳ್ಳುವಂತಿಲ್ಲ. ಇಂತಹಾ ಕಲಾವಿದರ ನೆರವಿಗೆ ಧಾವಿಸದ್ದಾರೆ ಕನ್ನಡ ಮತ್ತು ಸಂಸ್ಕೃತಿ ಸಚಿವರು
ಚಿಕ್ಕಮಗಳೂರು: ನಾಡಿನಾದ್ಯಂತ ಕೊರೋನಾ ಹಾವಳಿಯಿಂದಾಗಿ ಜನ ಭೀತಿಯ ಸುಳಿಯಲ್ಲಿ ಸಿಲುಕಿದ್ದಾರೆ. ಮಾರಕ ವೈರಾಣು ಹದರುಡುವದನ್ನು ತಡೆಯಲು ಲಾಕ್’ಡೌನ್ ಜಾರಿಯಲ್ಲಿದ್ದು ಇದರಿಂದಾಗಿ ಅವೆಷ್ಟೋ ಮಂದಿ ಉದ್ಯೋಗವಂಚಿತರಾಗಿದ್ದಾರೆ. ಈ ಪೈಕಿ ಕಲಾವಿದರ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ.
ಸರ್ಕಾರಿ ಅಥವಾ ಖಾಸಗಿ ಕಂಪೆನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಅವಕಾಶವಿದ್ದು ವೇತನ ಪಡೆಯುತ್ತಿದ್ದಾರೆ. ದಿನಗೂಲಿ ನೌಕರರಿಗೂ ಸಂಕಷ್ಟ ಕಾಲದಲ್ಲಿ ಸರ್ಕಾರ ನೆರವಿನ ಹಸ್ತ ಚಾಚಿದೆ. ಆದರೆ ಅತ್ತ ನೌಕರರೂ ಆಗಿರದೆ ಕೂಲಿ ಕಾರ್ಮಿಕರಾಗಿಯೂ ಗುರುತಾಗದೆ ಅತಂತ್ರ ಸ್ಥಿತಿಯಲ್ಲಿರುವ ಕಲಾವಿದರ ಬದುಕು ಮಾತ್ರ ತೂಗುಯ್ಯಾಲೆಯಲ್ಲಿದೆ. ಮನುಕುಲವನ್ನೇ ರಂಜಿಸುವ ಕಲಾವಿದರ ಪೈಕಿ ಸಾವಿರಾರು ಮಂದಿ ಇದೀಗ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.
ಕಲಾವಿದರ ಈ ಸಂಕಷ್ಟದ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಇದೀಗ ಅವರ ನೆರವಿಗೆ ಧಾವಿಸಿದ್ದಾರೆ. ಸಿನಿಮಾ, ರಂಗಭೂಮಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಕಲಾವಿಧರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವಂತೆ ತಮ್ಮ ಇಲಾಖಾ ಅಧಿಕಾರಿಗಳಿಗೆ ಸೂಚಿಸಿರುವ ಸಚಿವ ಸಿ.ಟಿ.ರವಿ, ಅವರಿಗೆ ನೆರವಾಗುವ ಭರವಸೆ ನೀಡಿದ್ದಾರೆ.
ಸರ್ಕಾರದಿಂದ ಸವಲತ್ತು ನೀಡುವ ತಕ್ಷಣದ ನಿರ್ಧಾರ ಸಾಧ್ಯವಿಲ್ಲ. ಹಾಗಾಗಿ ಸಚಿವರು ಉದ್ಯಮಿ ಸ್ನೇಹಿತರು ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ಈ ಕಲಾವಿದರಿಗೆ ನೆರವು ನೀಡುವ ಪ್ರಕ್ರಿಯೆಗೆ ಮುನ್ನುಡಿ ಬರೆದಿದ್ದಾರೆ. ಈ ಸಂಬಂಧ ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮ ಗಮನಸೆಳೆಯಿತು. ಕಲಾವಿದರಿಗೆ ಪಡಿತರ, ಅಕ್ಕಿ ಸಹಿತ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಸುಮಾರು 50 ಮಂದಿಗೆ ಚಿಕ್ಕಮಗಳೂರಿನಲ್ಲಿ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್’ಗಳನ್ನೂ ಸಿ.ಟಿ.ರವಿ ವಿತರಿಸಿದರು.
ಈ ವೇಳೆ ಮಾತನಾಡಿದ ಸಚಿವ ಸಿ.ಟಿ.ರವಿ, ಬೆಂಗಳೂರಿನ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ್ ಶೆಟ್ಟಿ ಅವರು ಈ ಮೊದಲ ದೇಣಿಗೆ ನೀಡಿದ್ದು, ಇಂದು ಸುಮಾರು 50 ಕಲಾವಿದರಿಗೆ ಕಿಟ್ ವಿತರಿಸಲಾಗಿದೆ. ರಾಜ್ಯಾದ್ಯಂತ ತೀರಾ ಬಡತನದಲ್ಲಿದ್ದಾರೆನ್ನಲಾದ ಸುಮಾರು 700 ಮಂದಿ ಅಸಹಾಯಕ ಕಲಾವಿದರ ಕುಟುಂಬಗಳ ಬಗ್ಗೆ ಪಟ್ಟಿ ಮಾಡಲಾಗಿದ್ದು, ಇದೆ ರೀತಿ ಎಲ್ಲೆಡೆ ಕಿಟ್ ವಿತರಿಸಲಾಗುವುದು ಎಂದು ವಿವರಿಸಿದರು.