ಮಂಗಳೂರು : ಹಿರಿಯ ಬಿಜೆಪಿ ಶಾಸಕ ಎಸ್.ಅಂಗಾರ ಅವರು ದಿಢೀರ್ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜ್ಯದಲ್ಲಿ ಕೊರೋನಾ ವೈರಸ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎಲ್ಲೆಡೆ ಲಾಕ್ ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿದ ಸಂದರ್ಭದಲ್ಲಿ ಶಾಸಕ ಎಸ್. ಅಂಗಾರ ಅಸ್ವಸ್ಥಗೊಂಡಿದ್ದಾರೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಕೈಗೊಳ್ಳಬೆಕಾದ ಕ್ರಮಗಳ ಕುರಿತು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬದಲ್ಲಿ ಇಂದು ಸಭೆ ನಡೆಸಿದ ಶಾಸಕರು ನಂತರ ಕಡಬ ಸಹಕಾರಿ ಸಂಘಕ್ಕೆ ಹೋಗಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ಅವರು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ರಕ್ತದೊತ್ತಡ ಕಡಿಮೆಯಾಗಿ ಅವರು ಅಸ್ವಸ್ಥರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ಸಲಹೆ ಮಾಡಿದರೆನ್ನಲಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಗಲಿಬಿಲಿಗೊಂಡರು. ಆದರೆ ಶಾಸಕರಿಗೆ ಯಾವುದೇ ತೊಂದರೆಯಿಲ್ಲ. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅವರ ಜೊತೆಗಿರುವ ನಾಯಕರು ತಿಳಿಸಿದ್ದಾರೆ. ಶಾಸಕ ಎಸ್. ಅಂಗಾರ ಅವರು 6 ಬಾರಿ ಸುಳ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಕರಾವಳಿಯ ಜನಾನುರಾಗಿ ಶಾಸಕರೆಂದು ಹೆಸರುವಾಸಿಯಾಗಿದ್ದಾರೆ.