ಪ್ರಧಾನಿಯವರು ತನ್ನ ಆಪ್ತರಿಗಷ್ಟೇ ಪ್ರಾಧಾನ್ಯತೆ ನೀಡುತ್ತಿದ್ದಾರೆಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತಲಿದೆ. ಆದರೆ ಮೋದಿ ಮನಸಿನಲ್ಲಿರುವವರು ಪಕ್ಷದ ಸೇನಾನಿಗಳು. ಪಕ್ಷದ ಆದ್ಯ ಕಾರ್ಯಕರ್ತರನ್ನು ಹಾಗೂ ಪಕ್ಷಕ್ಕಾಗಿ ಸರ್ವ ತ್ಯಾಗ ಮಾಡಿದವರನ್ನೇ ಅವರು ಸ್ಮರಿಸಿ ಗೌರವಿಸಿದ್ದಾರೆ.
ಇಂದು ಬಿಜೆಪಿ ಸಂಸ್ಥಾಪನಾ ದಿನ. ಪ್ರಸ್ತುತ ದೇಶವನ್ನು ಆಳುತ್ತಿರುವ ಪಕ್ಷ ಬಿಜೆಪಿ. ಹಾಗಾಗಿ ಈ ಪಕ್ಷದ ಸಂಸ್ಥಾಪನಾ ದಿನದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ರಾಷ್ಟ್ರೀಯತೆಯ ಸಂಘಟನೆ ಎಂದೇ ಗುರುತಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಶಕ್ತಿಯಾಗಿರುವ ಭಾರತೀಯ ಜನತಾ ಪಕ್ಷ ಆರೆಸ್ಸೆಸ್’ನ ಸುಸೂತ್ರದಂತೆ ಮುನ್ನಡೆಯುತ್ತಿದೆ. ಪ್ರಸ್ತುತ ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವ ಬಂದ ನಂತರ ಬಿಜೆಪಿ ಕೂಡಾ ಮೃದು ಹಿಂದೂತ್ವದ ನಿಲುವನ್ನು ಅನುಸರಿಸುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ನಡುವೆ ಇಂದು ಬಿಜೆಪಿ ಪಕ್ಷವು 40ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದು, ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಯಾವುದೇ ಸನ್ನಿವೇಶದ್ಲಲೂ, ಬಗ್ಗದೆ, ಜಗ್ಗದೆ ದುಡಿದವರೇ ತಮ್ಮ ಪಕ್ಷದ ಜೀವಾಳ ಎಂಬುದು ಅವರ ಅಂಬೋಣ.
ಪಕ್ಷ ಕಟ್ಟಲು ದಶಕಗಳ ಕಾಲ ಶ್ರಮಿಸಿದ ಕಾರ್ಯಕರ್ತರ ಕೊಡುಗೆಗಳನ್ನು ಅವರು ಸ್ಮರಿಸಿದ್ದಾರೆ. ಇಂತಹ ಕಾರ್ಯಕರ್ತರಿಂದಲೇ ಇಂದು ಪಕ್ಷ ಅಧಿಕಾರಕ್ಕೆ ಬಂದು ದೇಶದ ಜನರ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ ಎಂದಿರುವ ಮೋದಿ, ಅವರಿಗೆ ಗೌರವ ಪೂರ್ವಕ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಟ್ವೀಟ್ ಮಾಡಿರುವ ಅವರು, ಕೊರೋನಾ ಪೀಡಿತರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯ ಬಿಜೆಪಿ ಘಟಕ ಕೂಡಾ ತನ್ನ 40ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕರ್ತರಿಗೆ ಸಂದೇಶ ರವಾನಿಸಿದೆ. ‘ಸಹಸ್ರಾರು ತ್ಯಾಗ ಬಲಿದಾನಗಳ ಪ್ರತೀಕವಾಗಿ, ಸೈದ್ಧಾಂತಿಕ ಹೋರಾಟದ ಪ್ರತಿಫಲವೇ ಬಿಜೆಪಿ. ಬಡ ಭಾರತವಲ್ಲ ಸಿರಿ ಭಾರತ ಎಂಬ ಗಟ್ಟಿತನದ ನಿಲುವಿನಿಂದಲೇ ಬಂದ ಪಕ್ಷವೇ ಬಿಜೆಪಿ. ಇಂದು ಬಿಜೆಪಿ ಸಂಸ್ಥಾಪನಾ ದಿನ. ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಿ, ವಿಜಯದ ಸಂಕಲ್ಪ ಮಾಡೋಣ’ ಎಂದು ಪಕ್ಷದ ಪ್ರಮುಖರು ತಮ್ಮ ಸಾಮಾಜಿಕ ಜಾಲತಾಣಗಲ್ಲಿನ ಖಾತೆಗಳಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.