ಕ್ವಾರಂಟೈನ್’ನಿಂದ ಪರಾರಿ ವಿಚಾರ; ಪೊಲೀಸ್ ಮೇಲೆ ಹಲ್ಲೆ

ಯಾದಗಿರಿ: ಬುದ್ದಿವಾದ ಹೇಳಿದರೆ ಎದ್ದು ಬಂದು ಎದೆಗೆ ಒದ್ದುವವರೇ ಹೆಚ್ಚು.. ಇದೀಗ ಕೊರೋನಾ ಕಾಲದಲ್ಲಿ ಬುದ್ದಿವಾದ ಹೇಳಿದ ಪೊಲೀಸರೇ ಒದೆ ತಿಂದಿದ್ದಾರೆ. ಇದು ನಡೆದದ್ದು ಯಾದಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ.

ಕೊರೋನಾ ತಡೆಯಲು ಲಾಕ್’ಡೌನ್ ಜಾರಿಗೊಳಿಸಲಾಗಿದೆ. ಹಲವರನ್ನು ಕ್ವಾರಂಟೈನ್’ಗೆ ಒಳಪಡಿಸಲಾಗಿದೆ. ಸೋಂಕು ಹರಡದಂತೆ ಕಾಪಾಡುವ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನೂ ಜಾರಿಗೊಳಿಸಲಾಗಿದೆ. ಹೀಗಿದ್ದರೂ ಕ್ವಾರಂಟೈನ್‍ನಿಂದ ಹೊರ ಬಂದು ಊರಲ್ಲಿ ತಿರುಗುತ್ತಿದ್ದ ವ್ಯಕ್ತಿ ರಂಪಾಟ ಮೆರೆದ ಘಟನೆ ಹುಣಸಗಿ ತಾಲೂಕಿನ ಪಿಕೆ ನಾಯಕ ತಾಂಡದಲ್ಲಿ ನಡೆದಿದೆ.ಈತನಿಗೆ ಬುದ್ಧಿವಾದ ಹೇಳಿದ ಪೊಲೀಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಶಾಲೆಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಪೈಕಿ ವೆಂಕಟೇಶ್ ಎಂಬಾತ ಶಾಲೆಯ ಬೀಗ ಮುರಿದು ಹೊರಗಡೆ ತೆರಳಿದ್ದ. ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಡೆಕಲ್ ಪೊಲೀಸ್ ಠಾಣಾ ಎಎಸ್‍ಐ ಭೀಮಾಶಂಕರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ವಾರಂಟೈನ್’ಗೆ ಒಳಪಟ್ಟಿದ್ದ ವೆಂಕಟೇಶ್’ಗೆ ಬುದ್ದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಆ ಯುವಕ ಮಾತ್ರವಲ್ಲ, ಆತನ ಮನೆಯವರೂ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ. ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಕೊಡೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ.. ಜೂನ್ 1 ರಿಂದ ಪ್ರಯಾಣಿಕ ರೈಲು ಸೇವೆ; ಟಿಕೆಟ್ ಬುಕಿಂಗ್ ಶೀಘ್ರ ಆರಂಭ 

 

Related posts