ನವೆಂಬರ್ 7ರಂದು ಸರಳವಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಸಂಪ್ರದಾಯವಾಗಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಸರಳವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ನಾಡು-ನುಡಿ, ಸಾಹಿತ್ಯ, ರಂಗಭೂಮಿ, ಮಾಧ್ಯಮ, ಸಮಾಜಸೇವೆ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ 2020ನೇ ಸಾಲಿನ 65 ಸಾಧಕರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದವರು ವಿವರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ ಸಚಿವ ಸಿ.ಟಿ.ರವಿ ಅವರು, ನವೆಂಬರ್ 7ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿಯು ಒಂದು ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ ಒಳಗೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕಾರ್ಯಕ್ರಮಕ್ಕೆ 200 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಹೀಗಾಗಿ ಪ್ರಶಸ್ತಿ ವಿಜೇತರು ತಮ್ಮ ಜೊತೆ ಒಬ್ಬರನ್ನು ಮಾತ್ರ ಕರೆತರಬಹುದು. ಕೋವಿಡ್ ಹಿನ್ನಲೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪ್ರತಿಯೊಬ್ಬರು ಪಾಲಿಸಬೇಕೆಂದು ಮನವಿ ಮಾಡಿದರು.

ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಜಿಲ್ಲೆಗಳಿಂದ ಒಟ್ಟು 1780 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 130 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿದ್ದು, ಇದರಲ್ಲಿ ನಾಡು, ನುಡಿ, ಕೃಷಿ, ಕ್ರೀಡೆ, ಚಲನಚಿತ್ರ, ಯಕ್ಷಗಾನ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 65 ಸಾಧಕರನ್ನು ಮಾತ್ರ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.

Related posts