ಬೆಂಗಳೂರು: ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಜನಪ್ರಿಯವಾಗುತ್ತಿದೆ. ಒಂದು ಸಮೀಕ್ಷೆ ಪ್ರಕಾರ ಕೇಂದ್ರ ಸರ್ಕಾರದ ಕ್ರಮಗಳಿಂದಾಗಿ ಸಂಘ ಪರಿವಾರದತ್ತ ಯುವಜನ ಸಮೂಹ ಆಕರ್ಷಿತವಾಗುತ್ತಿದೆ.
ಅಯೋಧ್ಯೆ ರಾಮಜನ್ಮಭೂಮಿ ವಿಮುಕ್ತಿ, ಜಮ್ಮು-ಕಾಶ್ಮೀರದಲ್ಲಿನ 370 ನೇ ವಿಧಿ ರದ್ದು ಇತ್ಯಾದಿ ವಿಚಾರಗಳಲ್ಲಿ ಸಂಘದ ಹೋರಾಟ ಫಲಪ್ರದವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಸರಿಸಿರುವ ರೀತಿ ಹಾಗೂ ದೇಶದಲ್ಲಿ ಇದಕ್ಕೆ ಬೆಂಬಲ ಸಿಕ್ಕಿದೆ. ಅದರಲ್ಲೂ ಪೌರತ್ವ ಕಾಯಿದೆ ಹಿಂದೆ ಆರೆಸ್ಸೆಸ್ ಬ್ರೈನ್ ಅಡಗಿದ್ದು ಈ ಎಲ್ಲಾ ವಿಚಾರಧಾರೆಯನ್ನು ಯುವಜನ ಸಮೂಹ ಒಪ್ಪಿಕೊಂಡಿದೆ ಎಂಬುದು ಸಂಘದ ಪ್ರಮುಖರ ಅಭಿಪ್ರಾಯ.
ಅಷ್ಟೇ ಅಲ್ಲ ಶಾಖೆಯನ್ನೇ ಶಕ್ತಿ ಎಂದು ತಿಳಿದಿರುವ ಆರೆಸ್ಸೆಸ್ ಇದೀಗ ತನ್ನ ಸಂಘಸ್ಥಾನಗಳನ್ನು ದೇಶದ 80,000 ಸ್ಥಳಗಳಿಗೆ ತಲುಪಿಸುವಲ್ಲಿ ಯಶಸ್ಸಾಗಿದೆ. ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ ಆರೆಸ್ಸೆಸ್ ಕಾರ್ಯಚಟುವಟಿಕೆಗಳ ಬಗ್ಗೆ ಸಂಘದ ಸರಕಾರ್ಯವಾಹ ಭೈಯಾಜಿ ಜೋಶಿ ಒಂದಷ್ಟು ಮಾಹಿತಿ ಹಂಚಿಕೊಂಡರು. ತನ್ನ ವಿವಿಧ ಚಟುವಟಿಕೆಗಳ ಮೂಲಕ ಅರೆಸ್ಸೆಸ್ ದೇಶದ 80,000 ಸ್ಥಳಗಳಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ 3000 ಶಾಖೆಗಳು ಹೆಚ್ಚಾಗಿವೆ ಎಂದರು.
63,500 ನಿತ್ಯ ಶಾಖೆಗಳು ಹಾಗೂ 28,500 ಸಾಪ್ತಾಹಕ ಶಾಖೆಗಳು ನಡೆಯುತ್ತಿವೆ ಎಂದು ಭೈಯಾಜಿ ಜೋಶಿ ಅಂಕಿಅಂಶ ಒದಗಿಸಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಸ್ವಾವಲಂಬನೆ, ಸಾಮಾಜಿಕ ಸಾಮರಸ್ಯಗಳನ್ನೊಳಗೊಂಡ 5 ಆಯಾಮಗಳ ಕೆಲಸವನ್ನು ಸಂಘ ಹಮ್ಮಿಕೊಳ್ಳಲಿದ್ದು ಇದರಲ್ಲಿ ಕನಿಷ್ಠ ಒಂದು ಲಕ್ಷ ಜನ ಯುವಕರನ್ನು ತೊಡಗಿಸಿಕೊಳ್ಳುವ ಗುರಿ ಇದೆ ಎಂದು ಅವರು ತಿಳಿಸಿದ್ದಾರೆ.